Oplus_0

ಜ.29 ರಂದು ನಾಲವಾರ ಜಾತ್ರೆ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನಾಲವಾರ ಶ್ರೀಮಠದ ಕೊಡುಗೆ ಅನನ್ಯ: ಸಿಂಧ್ಯ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಕೊಡುಗೆ ಅನನ್ಯ ಎಂದು ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯ ಅವರು ಹೇಳಿದರು.

ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಶ್ರೀ ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ಆಯೋಜಿಸಿದ್ದ ನಾಲವಾರ ಜಾತ್ರೆ-2025 ರ ಉದ್ಘಾಟನೆ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಮಾರು ಮೂರ್ನಾಲ್ಕು ದಶಕಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಲವಾರ ಮಠದ ಮೂಲಕ ಪೀಠಾಧಿಪತಿಗಳಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಮಾಡುತ್ತಿರುವ ಕಾರ್ಯಗಳು ನಿಜಕ್ಕೂ ಮಾದರಿಯಾಗಿದ್ದು, ಜನಮಾನಸದಲ್ಲಿ ಆಧ್ಯಾತ್ಮಿಕ ಸಂಸ್ಕಾರ ಬಿತ್ತುವ ಮೂಲಕ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದರು.

ಇದೇ ತಿಂಗಳ 29 ಮತ್ತು 30 ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ, ಕಲ್ಯಾಣ ಕರ್ನಾಟಕದ ಬೃಹತ್ ಜಾತ್ರೆಗಳಲ್ಲಿ ಒಂದಾದ ನಾಲವಾರ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದು ಇಡೀ ದೇಶದ ಗಮನ ಸೆಳೆಯಲಿ ಎಂದು ಆಶಿಸಿದರು.

ಆಧುನಿಕ ಜಗತ್ತಿನಲ್ಲಿ ಮನುಷ್ಯ ವ್ಯಾವಹಾರಿಕತೆ ಹಾಗೂ ತಂತ್ರಜ್ಞಾನದ ಬೆನ್ನತ್ತಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಒದ್ದಾಡುತ್ತಿದ್ದಾನೆ. ಇಂತಹ ವೇಗದ ಧಾವಂತದ ಬದುಕಿಗೆ ಆಧ್ಯಾತ್ಮಿಕತೆ ಒಂದಷ್ಟು ಸಮಾಧಾನವನ್ನು ನೀಡಬಲ್ಲದು. ಪುರಾಣ ಪ್ರವಚನಗಳೂ ಸೇರಿದಂತೆ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಲವಾರ ಕೋರಿಸಿದ್ಧೇಶ್ವರ ಮಹಾಸಂಸ್ಥಾನಕ್ಕೆ ಬರುವ ಭಕ್ತರಿಗೆ ಶಾಂತಿ ಸಮಾಧಾನವನ್ನು ಕರುಣಿಸುತ್ತಿದೆ ಎಂದರು.

ಜಗತ್ತಿನಲ್ಲಿ ಭಾರತವನ್ನು ಗುರುತಿಸುವುದು ಇಲ್ಲಿನ ಧಾರ್ಮಿಕ ಮೌಲ್ಯಗಳ ಕಾರಣದಿಂದ. ಕಣಕಣದಲ್ಲೂ ಭಗವಂತನ ಸ್ವರೂಪ ಕಾಣುವ ಪ್ರಕೃತಿಯನ್ನು ದೇವರೆಂದು ಪೂಜಿಸುವ ಪುಣ್ಯಭೂಮಿ ನಮ್ಮ ರಾಷ್ಟ್ರ ಎಂದು ಹೇಳಿದರು.

ಇಂತಹ ಧಾರ್ಮಿಕ ಮೌಲ್ಯಗಳನ್ನು ಮರೆತರೆ ಭಾರತದ ಅಸ್ತಿತ್ವಕ್ಕೆ ಧಕ್ಕೆ ತಂದಂತಾಗುತ್ತದೆ. ಅಂತಹ ಉದಾತ್ತ ಮೌಲ್ಯಗಳ ಪುನರುತ್ಥಾನಕ್ಕಾಗಿ ನಾಲವಾರ ಶ್ರೀಮಠ ಶ್ರಮಿಸುತ್ತಿರುವುದು ಸಂತಸದ, ಅಭಿಮಾನದ ವಿಷಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ, ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾ ಸಂಸ್ಥಾನ ಮಠವು ಜಾಗೃತ ಸ್ಥಾನವಾಗಿದ್ದು, ಬೇಡಿದವರಿಗೆ ಬೇಡಿದ್ದನ್ನು ನೀಡುವ ಕಾಮಧೇನುವಾಗಿ ಈ ಭಾಗದ ಭಕ್ತರನ್ನು ಉದ್ಧರಿಸುತ್ತಿದೆ ಎಂದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು, ಜಾತಿ‌ ಮತ ಪಂಥಗಳ ಎಲ್ಲೆಯನ್ನು ಮೀರಿ, ಆಧ್ಯಾತ್ಮಿಕ ತಳಹದಿಯ ಸಮಾಜ ನಿರ್ಮಾಣ ಮಾಡುವುದು ನಾಲವಾರ ಶ್ರೀಮಠದ ಧ್ಯೇಯವಾಗಿದ್ದು, ಅದೇ ಹಾದಿಯಲ್ಲಿ ಶ್ರೀಮಠದ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಅವರಾತ್ರಿ ಅಮಾವಾಸ್ಯೆಯ ದಿನದಂದು ನಾಲವಾರ ಜಾತ್ರೆ ಪ್ರಾರಂಭವಾಗಲಿದ್ದು, ನಾಡಿನ ಸಮಸ್ತ ಭಕ್ತಕುಲಕೋಟಿ ಭಾಗವಹಿಸಿ ಪುನೀತರಾಗಬೇಕೆಂದು ಇದೇ ಸಂದರ್ಭದಲ್ಲಿ ಅವರು ಆಹ್ವಾನ ನೀಡಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇ.ಮೂ.ನಾಗಯ್ಯ ಶಾಸ್ತ್ರಿಗಳು ವಡಿಗೇರಾ ಅವರು ನಾಲವಾರ ನಂದಾದೀಪ ಸಿದ್ದ ಕುಲ ಚಕ್ರವರ್ತಿ ಶ್ರೀ ಕೋರಿಸಿದ್ಧೇಶ್ವರ ರ ಪುರಾಣ ಪ್ರವಚನ ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ ನಿರಂತರ ಸೇವಾಧಾರಿ ಸದ್ಭಕ್ತ ದಂಪತಿಗಳಿಗೆ ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಆಶೀರ್ವಾದ ಆಸ್ಪತ್ರೆ ಯಾದಗಿರಿಯ ಡಾ.ಸಿ.ಎಂ.ಪಾಟೀಲ, ಮಲ್ಲಣ್ಣ ಗೌಡ ಪೋಲಿಸ್ ಪಾಟೀಲ ನಾಲವಾರ, ಜಯಪ್ರಕಾಶ್ ಮಾಲಿ ಪಾಟೀಲ ನಾಲವಾರ, ಸಂಗಾರೆಡ್ಡಿಗೌಡ ಮಲ್ಹಾರ, ಸೋಮನಾಥರೆಡ್ಡಿ ಬಾಲಛೇಡ, ನಾಗಪ್ಪ ಕೋರಿ ಇದ್ದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು, ಡಾ.ಸಿದ್ಧರಾಜರೆಡ್ಡಿ ನಿರೂಪಿಸಿದರು. ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!