48 ಸಾವಿರ ಹಾಡುಗಳನ್ನು ಹಾಡಿದ ಸಂಗೀತ ತಪಸ್ವಿನಿ ಎಸ್.ಜಾನಕಿ ಉಸಿರನ್ನು ನಿಲ್ಲಿಸಿದ ಗಾನ ಕೋಗಿಲೆ: ಅಯ್ಯಪ್ಪ ರಾಮತೀರ್ಥ ಶೋಕ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಮ್ಮ ಸುಮಧುರ ಹಾಗೂ ಅತಿ ವಿಶಿಷ್ಟವಾದ ಕೋಗಿಲೆ ಕಂಠದ ಮೂಲಕ ದಶಕಗಳ ಕಾಲ ಕೋಟ್ಯಂತರ ಸಂಗೀತ ಪ್ರೇಮಿಗಳ, ಚಲನಚಿತ್ರ ಅಭಿಮಾನಿಗಳ ಹೃದಯವನ್ನು ಆಳಿದ ಪ್ರಖ್ಯಾತ ಹಿನ್ನಲೆ ಗಾಯಕಿ,19 ಕ್ಕೂ ಹೆಚ್ಚು ಬಹು ಭಾಷೆಯ 48 ಸಾವಿರ ಹಾಡುಗಳನ್ನು ಹಾಡಿದ ಸಂಗೀತ ತಪಸ್ವಿನಿ, ತನಗೆ ನೀಡಿದ ಪದ್ಮ ಭೂಷಣ ಅವಾರ್ಡನ್ನು ಸಹ ನಿರಾಕರಿಸಿದ ದಕ್ಷಿಣ ಭಾರತದ ನೈಟಿಂಗಲ್ ಎಂಬ ಖ್ಯಾತಿಯನ್ನೂ ಪಡೆದ ನಮ್ಮ ಹೆಮ್ಮೆಯ ‘ಗಾನಕೋಗಿಲೆ’ ಎಸ್. ಜಾನಕಿ ಅಮ್ಮನವರು ಇಂದು ವಿಧಿವಶರಾದ ಸುದ್ದಿ ತಿಳಿದು ನನಗೆ ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ಚಲನಚಿತ್ರ ನಿರ್ದೇಶಕ ಅಯ್ಯಪ್ಪ ರಾಮತೀರ್ಥ ಶೋಕ ವ್ಯಕ್ತಪಡಿಸಿದ್ದಾರೆ.

ಅವರು ನಮ್ಮ ನೆರೆಯ ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಪಲ್ಲಪಟ್ಲ (ರೇಪಲ್ಲಿ) ದಲ್ಲಿ ಏಪ್ರಿಲ್ 23 1938 ರಲ್ಲಿ ಜನಿಸಿದ ಜಾನಕಿ ಅಮ್ಮ ತಮ್ಮ 19ನೇ ವಯಸ್ಸಿನಲ್ಲಿಯೇ ಎಂ.ಎಲ್.ಎ ಎಂಬ ತೆಲುಗು ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.

1957ರಲ್ಲಿ ಪ್ರಥಮ ಬಾರಿಗೆ ಕನ್ನಡದ ಹಾಡನ್ನು ಹಾಡಿದ ಜಾನಕಮ್ಮ ಸನಾದಿ ಅಪ್ಪಣ್ಣ, ಬಯಲುದಾರಿ, ಗೆಜ್ಜೆಪೂಜೆ, ಸಂಧ್ಯಾರಾಗ, ಎರಡು ಕನಸು, ಗಾಳಿಮಾತು, ಮೈಸೂರು ಮಲ್ಲಿಗೆ, ಮುಂತಾದ ಅನೇಕ ಕನ್ನಡ ಚಿತ್ರಗೀತೆಗಳಿಗೆ ತಮ್ಮ ಸ್ವರವನ್ನು ತುಂಬಿದ್ದರು. ಕನ್ನಡದ ಚಿತ್ರರಂಗದ ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಗಾಗಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಹಾಗೂ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಜಾನಕಮ್ಮ 60 ವರ್ಷಗಳ ಸುದೀರ್ಘಕಾಲ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು ಎಂದು ತಿಳಿಸಿದ್ದಾರೆ.

88 ರ ಇಳಿ ವಯಸ್ಸಿನ ಈ ಹಿರಿಯ ಜೀವಿ ಮೈಸೂರಿನಲ್ಲಿ ಇಂದು ತಮ್ಮ ಕೊನೆಯುಸಿರು ಚೆಲ್ಲಿ ಬಾರದ ಲೋಕಕ್ಕೆ ತಮ್ಮ ಅಂತಿಮ ಪ್ರಯಾಣ ಮುಗಿಸಿದರು. ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಹಾಗೂ ಅಪಾರ ಅವರು ಎಂದೆಂದಿಗೂ ಈ ಭೂಮಿಯಲ್ಲಿ ಅಜರಾಮರ.

ಅವರ ನಿಧನದಿಂದಾಗಿ ದೇಶದ ಸಂಗೀತ ಸಾಮ್ರಾಜ್ಯದ ಒಂದು ಮಹೋನ್ನತ ಸಾಧನೆಯ ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ, ಅದ್ಭುತವಾದ ಕೋಗಿಲೆ ಕಂಠಸಿರಿಯ ಸಂಗೀತ ಸರಸ್ವತಿ ತನ್ನ ಅಸಾಧಾರಣ ಸಂಗೀತ ಸಾಧನೆಯ ಪ್ರಯಾಣ ಮುಗಿಸಿ ಬಿಟ್ಟರು. ನಾಳೆ ಮೈಸೂರಿನ ಎಚ್.ಡಿ.ಕೋಟೆ ಹತ್ತಿರದ ಬೋಗಾದಿಯಲ್ಲಿ ನಡೆಯಲಿರುವ ಅವರ ಅಂತಿಮ ವಿಧಿ ವಿಧಾನಗಳ ಪೂಜ್ಯ ಕಾರ್ಯಗಳಿಗೆ ಹಾಗೂ ಜಾನಕಿ ಅಮ್ಮನವರ ಆತ್ಮಕ್ಕೆ ಆ ದೇವರು ಶಾಂತಿ ಹಾಗೂ ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಸ್ಥರು ಮತ್ತು ನಾಡಿನ ಕೋಟ್ಯಂತರ ಅಭಿಮಾನಿಗಳಿಗೆ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!