Oplus_0

ಇಂಗಳಗಿ ಗ್ರಾಮದಲ್ಲಿ ವಿಬಿಜಿ.ರಾಮ್.ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ವಿಬಿಜಿ.ರಾಮ್.ಜಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಪಂಚಾಯಿತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಇಂಗಳಗಿ ಗ್ರಾಮದಲ್ಲಿ ಸುಮಾರು 1,000 ಕೂಲಿ ಕಾರ್ಮಿಕರಿದ್ದು, ವಿಬಿಜಿ.ರಾಮ್.ಜಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ದೊರೆಯದ ಕಾರಣ ಕಾರ್ಮಿಕರು ಉದ್ಯೋಗ ಅರಸಿ ಮಹಾನಗರಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕು ಸಾಗಿಸುವುದಕ್ಕೆ ಕಷ್ಟಕರವಾಗಿದೆ. ಕೆಲಸ ನೀಡದಿದ್ದರೆ ಮನೆಯ ಜವಾಬ್ದಾರಿ ಸರ್ಕಾರವೇ ನೋಡಿಕೊಳ್ಳಲಿ ಎಂದು ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ನರೇಗಾ ಯೋಜನೆಯಡಿ ಇಂಗಳಗಿ ಗ್ರಾಮದಲ್ಲಿ ಪ್ರತಿವರ್ಷ ಸುಮಾರು 40 ಸಾವಿರ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಆದರೆ ವಿಬಿಜಿ.ರಾಮ್.ಜಿ ಯೋಜನೆ ಜಾರಿಯಾದ ಬಳಿಕ ಗ್ರಾಮದಲ್ಲಿ ಕೆರೆಗಳಿಲ್ಲ ಎಂಬ ನೆಪವೊಡ್ಡಿ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಕೃಷಿ ಹೊಂಡದಂತಹ ವೈಯಕ್ತಿಕ ಕಾಮಗಾರಿಗಳಿಂದ ಗ್ರಾಮದ ಎಲ್ಲ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಸಮುದಾಯ ಆಧಾರಿತ ಕಾಮಗಾರಿಗಳನ್ನು ರೂಪಿಸಿ ಎಲ್ಲ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ನಾಲವಾರ, ಲಾಡ್ಲಾಪುರ, ದಂಡೋತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿಬಿಜಿ ರಾಮ್.ಜಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಇಂಗಳಗಿ ಗ್ರಾಮದಲ್ಲಿ ಮಾತ್ರ ಕೆರೆಗಳಿಲ್ಲ ಎಂಬ ಸಬೂಬ್ ಹೇಳಿ ಕಾರ್ಮಿಕರನ್ನು ಉದ್ಯೋಗದಿಂದ ವಂಚಿಸುವುದು ಸರಿಯಲ್ಲ ಎಂದು ಸಂಘದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಸರ್ವೆ ನಂ.25ರ 5 ಎಕರೆ, ಸರ್ವೆ ನಂ.163ರ 9.21 ಎಕರೆ ಹಾಗೂ ಸರ್ವೆ ನಂ.116ರ 161 ಎಕರೆ ಗಾಯರಾಣು ಜಮೀನು ಇದೆ. ಆದರೆ ಅಧಿಕಾರಿಗಳು ಇದನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ಕೆರೆಗಳ ನಿರ್ಮಾಣ ಮಾಡಿ, ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಎಲ್ಲ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರೆಯುವಂತೆ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೆಪಿಆರ್.ಎಸ್ ಗ್ರಾಮ ಘಟಕದ ಅಧ್ಯಕ್ಷೆ ಶಿಲ್ಪಾ ತೆಳಗೆರಿ, ಕಾರ್ಯದರ್ಶಿ ನಾಗಮ್ಮ ಪೂಜಾರಿ, ಮಮತಾ ನಾಟೀಕಾರ, ಖದೀರ್ ಪಾಶಾ, ಶಿವಕುಮಾರ ಹೂಗಾರ್, ಲಕ್ಷ್ಮೀ ಪೂಜಾರಿ, ಮಂಜುನಾಥ ಕರದಳ್ಳಿ ಭಾಗವಹಿಸಿದ್ದರು.

ಪಂಚಾಯಿತಿ ಕಾರ್ಯದರ್ಶಿ ಸಂಗಮೇಶ ಹಿರೇಮಠ ಮನವಿ ಪತ್ರ ಸ್ವೀಕರಿಸಿ, ಶೀಘ್ರದಲ್ಲೇ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!