ಚಿತ್ತಾಪುರದಲ್ಲಿ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ
ಕರ್ನಾಟಕ ರಾಜ್ಯೋತ್ಸವ ಹಬ್ಬದ ರೀತಿಯಲ್ಲಿ ಆಚರಿಸೋಣ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯೋತ್ಸವ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಹಾಗೂ ಹಬ್ಬದ ರೀತಿಯಲ್ಲಿ ಆಚರಿಸೋಣ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೆಂಬರ್ 1 ರಂದು ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬೆಳಿಗ್ಗೆ 8 ಗಂಟೆ ಅಧಿಕಾರಿಗಳು ಧ್ವಜಾರೋಹಣವನ್ನು ನೆರವೇರಿಸಿ ತಾಲೂಕು ಆಡಳಿತ ವತಿಯಿಂದ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ. ಪಟ್ಟಣದ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ಮಾಡಬೇಕು ಎಂದು ಪುರಸಭೆಗೆ ಸೂಚಿಸಿದರು, ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ದೀಪಾಲಂಕಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ರಾಜ್ಯೋತ್ಸವದ ಮೆರವಣಿಗೆಯಲ್ಲಿ ಬರೀ ಅಧಿಕಾರಿಗಳ ಮೆರವಣಿಗೆ ಆಗಬಾರದು, ಪಟ್ಟಣದ ಎಲ್ಲ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಭಾಗವಹಿಸಬೇಕು ಈ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಆಗಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರು ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.
ಮಹ್ಮದ್ ಇಬ್ರಾಹಿಂ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ಗೈರು ಆಗಿದ್ದಾರೆ ಪ್ರಮುಖವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗೈರು ಹಾಜರಾಗಿದ್ದಾರೆ ಹೀಗಾದರೆ ಹೇಗೆ ಎಲ್ಲರೂ ಸೇರಿ ಕೈಜೋಡಿಸಿದಾಗ ಮಾತ್ರ ರಾಜ್ಯೋತ್ಸವ ಯಶಸ್ವಿ ಆಗಲಿದೆ ಎಂದು ಹೇಳಿದರು.
ಪಟ್ಟಣದ ಎಲ್ಲ ಅಂಗಡಿಗಳ ನಾಮಫಲಕ ಕನ್ನಡದಲ್ಲಿ ಇರುವಂತೆ ಮಾಡಬೇಕು, ಭುವನೇಶ್ವರಿ ವೃತ್ತ ಅಭಿವೃದ್ಧಿಗೊಳಿಸಿ ಆಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಬೇಕು, ಎಲ್ಲ ಅಂಗಡಿಗಳ ಮೇಲೆ ಕನ್ನಡ ಧ್ವಜ ಅಳವಡಿಸುವಂತೆ ಸೂಚಿಸಬೇಕು, ಉಪಹಾರದ ವ್ಯವಸ್ಥೆ ಮಾಡಬೇಕು, ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ವ್ಯವಸ್ಥೆ ಮಾಡಬೇಕು, ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಬೇಕು ಮತ್ತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಬೇಕು, ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಬೇಕೆಂಬ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು.
ಚಂದ್ರಶೇಖರ ಬಳ್ಳಾ, ಕಾಶಿನಾಥ ಗುತ್ತೇದಾರ, ನರಹರಿ ಕುಲಕರ್ಣಿ, ಜಗದೇವ ದಿಗ್ಗಾಂವಕರ್, ರವಿ ಇವಣಿ, ಪ್ರಲ್ಹಾದ ವಿಶ್ವಕರ್ಮ, ವೀರಣ್ಣ ಸುಲ್ತಾನಪೂರ್, ಮಾತನಾಡಿದರು.
ಗ್ರೇಡ್ -2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಅಧಿಕಾರಿಗಳಾದ ಆರತಿ ತುಪ್ಪದ್, ಕರಣಕುಮಾರ ಸವಿತಾ ಗೋಣಿ, ಚೇತನ್ ಗುರಿಕಾರ, ಬಾಲಕೃಷ್ಣ, ಡಾ.ಶಂಕರ ಕಣ್ಣಿ, ಡಾ.ಸೃಯಾದ್ ರಜೀವುಲ್ಲಾ, ಶಿವಶರಣಪ್ಪ ಮಂಠಾಳೆ, ಬಸವರಾಜ ಜೆಇ ವಾಡಿ, ಲೋಹಿತ್ ಕಟ್ಟಿಮನಿ, ಅಮೃತ್ ಕ್ಷೀರಸಾಗರ, ಮಹ್ಮದ್ ಜಾವೀದ್, ವಿಜಯಲಕ್ಷ್ಮಿ, ಸುನೀತಾ, ರಾಜಕುಮಾರ, ಚಂದ್ರಕಾಂತ ಮುಖಂಡರಾದ ಚಂದ್ರಶೇಖರ ಉಟಗೂರ, ಲಕ್ಷ್ಮೀಕಾಂತ ತಾಂಡೂರಕರ್, ಶರಣು ದಂಡೋತಿ, ವೆಂಕಟೇಶ್ ಬಳಿಚಕ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.