ಗೆಳೆಯರ ಬಳಗದಿಂದ ಸುರೇಶ್ ಗುತ್ತೇದಾರ ನುಡಿನಮನ | ಸುರೇಶ್ ಚಿಕ್ಕ ವಯಸ್ಸಿನಲ್ಲಿ ಅಪಾರ ಜನಮನ್ನಣೆ ಪಡೆದಿದ್ದ: ನಾಗರೆಡ್ಡಿ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಂಚ್ ಗ್ಯಾರಂಟಿ ಸಮಿತಿ ಸದಸ್ಯ, ಈಡಿಗ ಸಮಾಜದ ಮುಖಂಡ ಸುರೇಶ್ ಗುತ್ತೇದಾರ ಎಲ್ಲರೊಂದಿಗೆ ಬೆರೆಯುವ ಮೂಲಕ ಚಿಕ್ಕ ವಯಸ್ಸಿನಲ್ಲಿ ಅಪಾರ ಜನಮನ್ನಣೆ ಪಡೆದಿದ್ದರು ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಸುರೇಶ್ ಗುತ್ತೇದಾರ ಗೆಳೆಯರ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಅಂತಿಮ ಸಂಸ್ಕಾರದ ಸಮಯದಲ್ಲಿ ಆಗಮಿಸಿದ ಜನಸ್ತೋಮವೇ ಸುರೇಶ್ ಗುತ್ತೇದಾರ ವ್ಯಕ್ತಿತ್ವ ತೋರಿಸುತ್ತದೆ ಎಂದು ಸ್ಮರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಸುರೇಶ್ ಗುತ್ತೇದಾರ ಒಬ್ಬ ಕ್ರಿಯಾಶೀಲ ಯುವ ಉತ್ಸಾಹಿ ಮುಖಂಡರಾಗಿದ್ದರು. ಅವರ ಅಗಲಿಕೆಯಿಂದ ಸಮಾಜಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ನಷ್ಟವಾಗಿದೆ ಎಂದು ಹೇಳಿದರು.
ಪಂಚ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಮಾತನಾಡಿ, ಎಲ್ಲರೊಂದಿಗೆ ನಗುನಗುತ್ತಲೇ ಮಾತನಾಡುವ ಸುರೇಶ್ ಗುತ್ತೇದಾರ ಒಬ್ಬ ಸ್ನೇಹಜೀವಿಯಾಗಿದ್ದರು, ಅವರು ಈಗ ಇಲ್ಲ ಎಂದರೆ ನಂಬುವುದಕ್ಕೆ ಆಗುತ್ತಿಲ್ಲ ಎಂದು ಸ್ಮರಿಸಿದರು.
ಕೋಲಿ ಸಮಾಜದ ಮುಖಂಡ ಬಸವರಾಜ ಚಿನ್ನಮಳ್ಳಿ ಮಾತನಾಡಿ, ಚಿಕ್ಕವರು ಹಾಗೂ ದೊಡ್ಡವರ ಜೊತೆಗೆ ಸರಳವಾಗಿ ಬೆರೆಯುವ ಹಾಗೂ ಎಲ್ಲರಿಗೂ ಅಯ್ಯಾ ಎಂದು ಸಂಬೋಧಿಸುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡ ಸುರೇಶ್ ಗುತ್ತೇದಾರ ಇನ್ನೂ ಬಾಳಿ ಬದುಕಬೇಕಾದವರು ಏಕಾಏಕಿ ಅಗಲಿಕೆಯಿಂದ ತುಂಬಾ ನೋವುಂಟು ಮಾಡಿದೆ ಎಂದು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಮಂತ ಗುತ್ತೇದಾರ, ನಿಂಗಣ್ಣ ಹೆಗಲೇರಿ, ರಾಮಲಿಂಗ ಬಾನರ್, ಪ್ರಭು ಹಲಕರ್ಟಿ, ಕರಣಕುಮಾರ್ ಅಲ್ಲೂರ, ರವಿ ಸೂಲಹಳ್ಳಿ, ದೇವು ಯಾಬಾಳ, ಸಂಜಯ್ ಬುಳಕರ್, ರಾಮಲಿಂಗ ಹಡಪದ, ಅಶ್ವಥ್ ರಾಠೋಡ, ಎಂಡಿ ಯುನುಸ್, ಮಲ್ಲಿಕಾರ್ಜುನ ಸಂಗಾವಿ, ಕಾಶಿನಾಥ ಗುತ್ತೇದಾರ, ರಾಜೇಶ್ ಗುತ್ತೇದಾರ, ನರಸಯ್ಯ ಕರದಾಳ, ಚೆನ್ನವೀರ ಕಣಗಿ, ಹಣಮಂತ ಚೌದರಿ, ರಾಜಾಹುಲಿ, ರವಿ ಗುತ್ತೇದಾರ, ಮೈಪಾಲ್ ಮೂಲಿಮನಿ, ಲಕ್ಷ್ಮೀಕಾಂತ್ ಗುತ್ತೇದಾರ, ಉಮೇಶ್ ಗುತ್ತೇದಾರ, ಮಸ್ತಾನ್ ಪಟೇಲ್, ಮಹಾದೇವ ಮುಗುಟಿ, ನಾಗೇಂದ್ರ ರಾವೂರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ದೇವಪ್ಪ ನಂದೂರಕರ್ ನಿರೂಪಿಸಿದರು, ಕಾಶಿರಾಯ ಕಲಾಲ್ ವಂದಿಸಿದರು.

