ಲಾಡ್ಲಾಪೂರ ಗ್ರಾಮ ಪಂಚಾಯಿತಿಯಲ್ಲಿ ಪ್ರಧಾನಮಂತ್ರಿ ಅವಾಜ್ ಯೋಜನೆ ಅಡಿಯಲ್ಲಿ ಲಂಚಾವತಾರ, ತಡೆಹಿಡಿಯಲು ರಮೇಶ ಡಿ.ಸಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಲಾಡ್ಲಾಪೂರ ಗ್ರಾಮ ಪಂಚಾಯಿತಿಯಲ್ಲಿ ಪ್ರಧಾನಮಂತ್ರಿ ಅವಾಜ್ ಯೋಜನೆ ಅಡಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕಿನ ಅಧಿಕಾರಿಗಳಿಂದ ಲಂಚಾವತಾರ ನಡೆದಿದೆ ಕೂಡಲೇ ತಡೆಹಿಡಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ ಡಿ.ಸಿ ಆಗ್ರಹಿಸಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (PMAY) ಕಂತು ಬಿಡುಗಡೆಗೆ ಲಂಚ ಕೇಳುವುದು ಶಿಕ್ಷಾರ್ಹ ಅಪರಾಧವಾಗಿದೆ, ಆದರೂ ಸಹ ಅಧಿಕಾರಿಗಳು ಮಾತ್ರ ಬಹಿರಂಗವಾಗಿಯೇ ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದಾರೆ. ಹೀಗಾಗಿ ಕೂಡಲೇ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದುಡ್ಡು ಕೊಟ್ಟವರಿಗೆ ಮಾತ್ರ ಬಿಲ್ ಪಾವತಿಸುತ್ತಾರೆ, ದುಡ್ಡು ಕೊಡದಿದ್ದರೆ ಬಿಲ್ ಪಾವತಿಸುವುದಿಲ್ಲ. ಒಂದು ಮನೆಗೆ ಜಿಪಿಎಸ್ ಮಾಡಲು ರೂ. 500 ಕೇಳುತ್ತಾರೆ ಮತ್ತು ಲಾಸ್ಟ್ ಬಿಲ್ಲಿನ ಕಂತಿಗೆ ರೂ. 4000 ಕೇಳುತ್ತಿದ್ದಾರೆ. ಇದರಿಂದ ಫಲಾನುಭವಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಪ್ರಸ್ತುತ ಬರಗಾಲದ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು ಬಡ ಫಲಾನುಭವಿಗಳಿಂದ ಲಂಚದ ಬೇಡಿಕೆ ಇಡುತ್ತಿರುವ ಮೂಲಕ ಮತ್ತಷ್ಟು ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಘೋರ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಈ ಕೂಡಲೇ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈಕಡೆ ಗಮನ ಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಬಡ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ಅವರಿಗೆ ಸಿಗಬೇಕಾದ ಎಲ್ಲ ಕಂತಿನ ಹಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

