ಚಿತ್ತಾಪುರ ಸರ್ಕಾರಿ ನೌಕರರ ಸಂಘದ ಚುನಾವಣೆ ಭರ್ಜರಿ ಮತದಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಿತ್ತಾಪುರ ತಾಲೂಕು ಶಾಖೆಗೆ 2024-29 ನೇ ಸಾಲಿನ ಅವಧಿಗಾಗಿ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಸೋಮವಾರ ಶಿಕ್ಷಕ ಮತದಾರರು ಉತ್ಸಾಹದಿಂದ ಚುನಾವಣೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿದರು.
ಪ್ರಾಥಮಿಕ ಶಿಕ್ಷಣ ವಿಭಾಗದಿಂದ ಸಂಗಣ್ಣಗೌಡ ಮಲ್ಯದ್ ನೇತೃತ್ವದ ಪ್ರಜಾಸತ್ತಾತ್ಮಕ ಕ್ರಿಯಾಶೀಲ ಶಿಕ್ಷಕರ ಪೆನಲ್ ಹಾಗೂ ಬಸವರಾಜ ಬಳೂಂಡಗಿ ಅವರ ಶಿಕ್ಷಕರ ಸ್ನೇಹಿ ಪೆನಲ್ ನಡುವೆ ಈಗಾಗಲೇ ಅಬ್ಬರದ ಪ್ರಚಾರ ನಡೆದಿದ್ದು ಮತದಾನದ ಸಮಯದಲ್ಲಿ ಮಾತ್ರ ಎರಡು ಪೆನಲ್ ಗಳ ಅಭ್ಯರ್ಥಿಗಳು ಜೊತೆಯಾಗಿಯೇ ಮತದಾನ ಮಾಡಿ ಫೋಟೋ ಶೂಟ್ ಗೆ ಫೋಸ್ ನೀಡಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಬಸವರಾಜ ಬಳೂಂಡಗಿ, ಸಂಗಣ್ಣಗೌಡ ಮಲ್ಯದ್, ಶಿವಾನಂದ ನಾಲವಾರ, ಸಂತೋಷ ಶಿರನಾಳ, ಸುಮಂಗಲಾ ಸೇರಿದಂತೆ ಶಿಕ್ಷಕ ಮತದಾರರು ಉಪಸ್ಥಿತರಿದ್ದರು.
ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ 11 ಗಂಟೆಗೆ 401 ಮತದಾರರ ಪೈಕಿ 150 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಸಾಯಂಕಾಲ 4 ಗಂಟೆವರೆಗೆ ಮತದಾನ ನಡೆಯಲಿದ್ದು, 4.30 ರಿಂದ ಮತ ಎಣಿಕೆ ಕಾರ್ಯ ನಡೆದು ರಾತ್ರಿ 8 ಗಂಟೆಯವರೆಗೆ ಫಲಿತಾಂಶ ಹೊರಬೀಳಲಿದೆ ಎಂದು ಹೇಳಲಾಗಿದೆ.