ಭಾಗೋಡಿ ಮರಳುಗಾರಿಕೆ ತಡೆಹಿಡಿದು ಸರ್ಕಾರಿ ವಾಹನಕ್ಕೆ ಅಡ್ಡಗಟ್ಟಿದ ಮಣಿಕಂಠ ರಾಠೋಡ ಪೊಲೀಸ್ ವಶಕ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದ ಕಾಗಿಣಾ ನದಿ ಹತ್ತಿರ ಕೆ.ಆರ್.ಐ.ಡಿ.ಎಲ್ ವ್ಯಾಪ್ತಿಯ ಮರಳು ದಕ್ಕಾದಿಂದ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮರಳು ಟಿಪ್ಪರ್ ಗಳನ್ನು ತಡೆಹಿಡಿದು ಸ್ಥಳದಲ್ಲಿಯೇ ಧರಣಿ ನಡೆಸಿದ ಪ್ರಸಂಗ ಸೋಮವಾರ ರಾತ್ರಿ ನಡೆದಿದೆ.
ಅಕ್ರಮ ಮರಳು ಸಾಗಣೆಯಿಂದ ಕಾಗಿಣಾ ನದಿ ನಾಶವಾಗುತ್ತಿದೆ ಹಾಗೂ ಟಿಪ್ಪರ್ ಗಳು ಓಡಾಟದಿಂದ ರಸ್ತೆಗಳು ಹಾಳಾಗುತ್ತವೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ ಹಾಗೂ ಗಣಿ ಇಲಾಖೆಗೆ ಸಾಕಷ್ಟು ಬಾರಿ ಹೇಳಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಈ ಕೂಡಲೇ ಅಕ್ರಮ ಮರಳುಗಾರಿಕೆಯಲ್ಲಿದ್ದ 6 ಟಿಪ್ಪರ್, 4 ಹಿಟಾಚಿ ಹಾಗೂ 2 ಟ್ರ್ಯಾಕ್ಟರ್ ಗಳನ್ನು ಸೀಜ್ ಮಾಡಿ ಗೇಟ್ ಬಂದ್ ಮಾಡಬೇಕು ಎಂದು ಮಣಿಕಂಠ ಪಟ್ಟು ಹಿಡಿದರು, ಅಲ್ಲದೇ ಭೇಟಿ ನೀಡಿ ಪರಿಶೀಲನೆ ಮಾಡಿದ ಮತ್ತು ಕೈಗೊಳ್ಳುವ ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ ಗಣಿ ಇಲಾಖೆಯ ಇಂಜಿನಿಯರ್ ಧನರಾಜ್ ಅವರಿಗೆ ಬಿಗಿಪಟ್ಟು ಹಿಡಿದರು. ಈ ಮದ್ಯೆ ಇಂಜಿನಿಯರ್ ಮತ್ತು ಮಣಿಕಂಠ ರಾಠೋಡ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು, ವರದಿ ನೀಡುವುತನಕ ಇಲ್ಲಿಂದ ಹೋಗುವುದಿಲ್ಲ ಎಂದು ಹೇಳಿ ಇಂಜಿನಿಯರ್ ಸರ್ಕಾರಿ ವಾಹನದ ಮುಂದೆ ಅಡ್ಡಗಟ್ಟಿ ಕುಳಿತುಕೊಂಡು ಧರಣಿ ನಡೆಸಿದರು.
ಇಲ್ಲಿನ ವಾಸ್ತವಾಂಶ ಕುರಿತು ಮೇಲಾಧಿಕಾರಿಗೆ ವರದಿ ನೀಡಲಾಗುವುದು ನಿಮಗೆ ವರದಿ ನೀಡಲು ಬರುವುದಿಲ್ಲ ಎಂದು ಎಷ್ಟೇ ಹೇಳಿದರೂ ಮಣಿಕಂಠ ಮಾತ್ರ ಜಾಗ ಬಿಟ್ಟು ಕದಲಲಿಲ್ಲ ಇದು ಇಂಜಿನೀಯರ್ ಗೆ ತುಂಬಾ ತಲೆನೋವಾಗಿ ಕೊನೆಗೆ ಮಾಡಬೂಳ ಪೊಲೀಸ್ ಠಾಣೆಯ ಪೊಲೀಸರಿಗೆ ಕಾಲ್ ಮಾಡಿ ವಿಷಯ ತಿಳಿಸಿದ ಕೆಲ ಹೊತ್ತಿನಲ್ಲೇ ಸಿಪಿಐ ಜಗದೇವಪ್ಪ ಪಾಳಾ ಸ್ಥಳಕ್ಕಾಗಮಿಸಿ ಮಣಿಕಂಠ ಗೆ ಎಷ್ಟೇ ಸಮಜಾಯಿಷಿ ನೀಡಿದರೂ, ಜಾಗ ಬಿಟ್ಟು ಏಳದೇ ಇರುವುದರಿಂದ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಸರ್ಕಾರಿ ವಾಹನದ ಮುಂದೆ ಕುಳಿತಿದ್ದ ಸ್ಥಳದಿಂದ ಎತ್ತಿ ರಸ್ತೆ ಬದಿ ಕುಳ್ಳರಿಸಿದರು.
ಸರ್ಕಾರಿ ವಾಹನಕ್ಕೆ ಅಡ್ಡಗಟ್ಟಿದ ಎಂದು ಕೇಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಂಜಿನಿಯರ್ ಗೆ ಸಿಪಿಐ ಪಾಳಾ ಹೇಳಿದರು. ಪ್ರಸ್ತುತ ಮಣಿಕಂಠ ರಾಠೋಡ ಮಾಡಬೂಳ ಪೊಲೀಸ್ ಠಾಣೆಯ ವಶದಲ್ಲಿ ಇದ್ದಾರೆ.