ಕಲಬುರ್ಗಿ: ದಿ. ಜಿ.ರಾಮಕೃಷ್ಣ ಅವರ 88 ನೇ ಜನ್ಮದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಮಾಜಿ ಸಚಿವ ದಿ. ಜಿ.ರಾಮಕೃಷ್ಣ ಅವರ ಅಭಿಮಾನಿಗಳ ಬಳಗದ ವತಿಯಿಂದ ದಿ. ಜಿ.ರಾಮಕೃಷ್ಣ ಅವರ 88 ನೇ ಜನ್ಮ ದಿನದ ಅಂಗವಾಗಿ ಕಲಬುರಗಿ ನಗರದ ಟೌನ್ ಹಾಲ್ ಮುಂಭಾಗದಲ್ಲಿರುವ ಡಾ. ಬಾಬು ಜಗಜೀವನ್ ರಾಮ್ ಪುತ್ಥಳಿ ಆವರಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಕಾರ್ಯಕ್ರಮ ನಡೆಯಿತು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ದಲಿತ ಮಾದಿಗ ಸಮನ್ವಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಿಂಗರಾಜ್ ತಾರಫೈಲ್, ಮಾಜಿ ಸಚಿವ ಹಾಗೂ ಕಮಲಾಪುರ ಮತ್ತು ಗ್ರಾಮೀಣ ಕ್ಷೇತ್ರಗಳ ಮಾಜಿ ಶಾಸಕ ದಿ. ಜಿ.ರಾಮಕೃಷ್ಣ ಅವರು ವಿಧಿವಶರಾಗಿ ನಾಲ್ಕು ವರ್ಷಗಳು ಕಳೆದಿದೆ ಆದರೂ ಅವರು ನೆನಪು ಹಾಗೂ ಅವರು ಸಲ್ಲಿಸಿದ ಸೇವೆಯಿಂದ ಜೀವಂತವಾಗಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ತಾಳ್ಮೆ ಸಹನೆಯಿಂದ ಚುನಾವಣೆ ಎದುರಿಸಿ ಪಕ್ಷದ ಶಿಸ್ತಿನ ನಾಯಕರಾಗಿ ಹೊರಹೊಮ್ಮಿ ಶಾಸಕರಾಗಿ, ಸಚಿವರಾಗಿ ಜನಪರ ಕಾರ್ಯಗಳನ್ನು ಮಾಡಿ ಜನುಮನದಲ್ಲಿ ಹಚ್ಚು ಹಸಿರಾಗಿ ಉಳಿದಿದೆ ಎಂದು ಹೇಳಿದರು.
ಜಿಲ್ಲಾ ಪತ್ರಿಕಾ ಮಾಧ್ಯಮ ದಲಿತ ಮಾದಿಗ ಸಮನ್ವಯ ಸಮಿತಿಯ ಅಧ್ಯಕ್ಷ ರವಿ ಬೆಳಮಗಿ ಮಾತನಾಡಿ, ದಿ. ಜಿ.ರಾಮಕೃಷ್ಣ ಕಲ್ಯಾಣ ಕರ್ನಾಟಕ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಮತ್ತು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರು. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಎಲ್ಲರ ಮನಸ್ಸು ಗೆದ್ದು ಪಕ್ಷದ ಸಿದ್ಧಾಂತಕ್ಕೆ ಬೆಲೆ ಕೊಟ್ಟು ಜನಪರ ಕೆಲಸವನ್ನು ಮಾಡಿದ ಧೀಮಂತ ನಾಯಕ ದಿ. ಜಿ.ರಾಮಕೃಷ್ಣನವರು ಎಂದು ಬಣ್ಣಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಡಿಎಂಎಸ್ಎಸ್ ಸಂಘಟನಾ ಕಾರ್ಯದರ್ಶಿ ದಿಗಂಬರ ತ್ರಿಮೂರ್ತಿ, ಶಹಾಬಾದ ತಾಲೂಕ ಅಧ್ಯಕ್ಷ ಶಿವರಾಜ್ ಕೊರೆ ಸೇರಿದಂತೆ ಮಾದಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.