ಬಿ.ಆರ್. ಪಾಟೀಲರ 76ನೇ ಹುಟ್ಟುಹಬ್ಬ ಆಚರಣೆ, ಹುಟ್ಟು ಸಾವುಗಳ ನಡುವಿನ ಬದುಕು ಮುಖ್ಯ: ಸತ್ಯಂಪೇಟೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವುಗಳ ನಡುವಿನ ಬದುಕು ಮುಖ್ಯ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರಭುದೇವ ನಗರದ ನೀಲಕಂಠೇಶ್ವರ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಸಿರ ನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳ ಸಲಹೆಗಾರ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಅವರ 76 ನೇ ಹುಟ್ಟು ಹಬ್ಬದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾಮಕ್ಕಳಿಗೆ ಬಸವಣ್ಣನವರ ವಚನ ಸುಧೆ ಕೈಪಿಡಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಸಮಾಜವಾದಿ ಹಿನ್ನಲೆಯ ಪಾಟೀಲರು ಈಗಿನ ಕಾಲದ ಅಪರೂಪದ ರಾಜಕಾರಣಿ ಎಂದರು.
ಬಿ.ಆರ್. ಪಾಟೀಲ ಅವರ ಜನ್ಮದಿನ ನಿಮಿತ್ತ ಶಾಲಾ ಮಕ್ಕಳಿಗೆ ವಚನ ಸಾಹಿತ್ಯದ ಅರಿವು ಮೂಡಿಸಲು ವಚನಸುಧೆ ಕಿರು ಹೊತ್ತಿಗೆ ಕೊಡುವ ಕಾರ್ಯ ಮಾದರಿಯಾಗಿದ್ದು, ಕನ್ನಡಕ್ಕೆ ಸತ್ವ ತಂದುಕೊಟ್ಟ ವಚನ ಸಾಹಿತ್ಯ ವಿಶ್ವದ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಥೆಗಾರ ವಿಶ್ವನಾಥ ಭಕರೆ, ಗುತ್ತಿಗೆದಾರ ಪ್ರಭು ಪಾಣೇಗಾಂವ, ಪ್ರಮುಖರಾದ ನಾಗಣ್ಣ ನೀಲೂರೆ, ಪಂಡಿತರಾವ ಪಾಟೀಲ ಸೇರಿದಂತೆ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು
ಡಾ. ರಾಜಶೇಖರ ಪಾಟೀಲ ಹೆಬಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಷಣ್ಮುಖಯ್ಯ ಸ್ವಾಮಿ ನಿರೂಪಿಸಿದರು.