ಕಲಬುರಗಿಯಲ್ಲಿ ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕಾರ, ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು ಕಾಲೇಜಿನಲ್ಲಿ ಗೆಳೆಯರ ಬಳಗದ ಆಶ್ರಯದಲ್ಲಿ ಹರಿಯಾಣದ ವಿಶ್ವವಿದ್ಯಾಲಯದ ಮ್ಯಾಜಿಕ್ ಬುಕ್ ಆಫ್ ರಿಕಾರ್ಡ್ಸ್ ಗೌರವ ಡಾಕ್ಟರೇಟ್ ಪಡೆದ ಹುಮನಾಬಾದ್‌ನ ಸಂಗೀತ, ಹಾಸ್ಯ ಕಲಾವಿದ, ಸಮಾಜ ಸೇವಕ ಡಾ. ರೇವಣಸಿದ್ಧಯ್ಯ ಹಿರೇಮಠ ಹಾಗೂ ಭಾರತೀಯ ಪುರಸ್ಕಾರ ಪುರಸ್ಕೃತೆ ಸಾಕ್ಷಿ ಆರ್. ಹಿರೇಮಠ ಅವರನ್ನು ಹೃದಯಸ್ಪರ್ಶಿಯಾಗಿ ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರೇವಣಸಿದ್ದಯ್ಯ ಹಿರೇಮಠ, ಪ್ರತಿಯೊಬ್ಬರು ಪರಿಶ್ರಮಪಟ್ಟು ನೋವು, ನಲಿವು, ಕಷ್ಟ, ನಷ್ಟ ಅರಿತಾಗಲೇ ಬಾಳಿಗೊಂದು ಬೆಲೆ ಸಿಗುವುದು. ಸಾಧನೆ ತುಡಿತ ಇದ್ದವರಿಗೆ ಎಂಥ ಕಷ್ಟ ಕಾರ್ಪಣ್ಯ ಎದುರಾದರೂ ಮೆಟ್ಟಿ ನಿಲ್ಲುವ ಎದೆಗಾರಿಕೆ ಹೊಂದಿರಬೇಕು. ಮತ್ತೊಬ್ಬರ ಬದುಕಿಗೆ ಒಳಿತಾಗುವ ನಿಟ್ಟಿನಲ್ಲಿ ಪರೋಪಕಾರ ಸೇವೆ ಸಲ್ಲಿಸಿದ್ದಾಗ ಮಾತ್ರ ಆತ್ಮತೃಪ್ತಿ ಸಿಕ್ಕು ಜೀವನಕ್ಕೊಂದು ಸಾರ್ಥಕ ಬರಲಿದೆ ಎಂದರು.
ಉದ್ಘಾಟಿಸಿದ ತಾಜನಗರದ ನಗರ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ವೇಣುಗೋಪಾಲ ದೇಶಪಾಂಡೆ, ಮನುಷ್ಯ ಕಷ್ಟದಲ್ಲೇ ಬೆಳೆದಾಗ ಬದುಕಿನ ತಿರುಳು ಗೊತ್ತಾಗಲಿದೆ. ಶಿಕ್ಷಣದಿಂದಲೇ ಬದುಕು ಬದಲಾವಣೆಯಾಗಲಿದೆ. ಹೀಗಾಗಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸ ಬೆಳೆಸಿಕೊಂಡು ಅಧ್ಯಯನಶೀಲರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯರಾದರೆ ವ್ಯಕ್ತಿತ್ವ ವಿಕಸನಗೊಳ್ಳಲಿದೆ. ಹೀಗಾಗಿ, ಅದೃಷ್ಟಕ್ಕೆ ಕೈಕಟ್ಟಿಕೊಂಡರೆ ಸಾಲದು ಶೇ.99 ರಷ್ಟು ನಿರಂತರವಾಗಿ ಪರಿಶ್ರಮಪಟ್ಟಾಗ ಗುರಿ ತಲುಪಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲ್ಯಾಣಕುಮಾರ ಶೀಲವಂತ ಮಾತನಾಡಿ, ವಿದ್ಯಾರ್ಥಿಗಳಾದವರು ಉನ್ನತ ಗುರಿ ಇಟ್ಟುಕೊಂಡು ಸತತ ಪರಿಶ್ರಮ ಪಟ್ಟು ಬದುಕು ರೂಪಿಸಿಕೊಳ್ಳಬೇಕು. ಹೆತ್ತವರು, ಗುರು ಹಿರಿಯರನ್ನು ಸದಾ ಸ್ಮರಿಸಿಕೊಂಡು ಓದಿದ್ದಾಗ ಮಾತ್ರ ಉನ್ನತ ಸಾಧನೆ ಮಾಡಬಹುದು ಎಂದು ಮಾರ್ಮಿಕವಾಗಿ ನುಡಿದರು.
ಇದೇ ವೇಳೆಗೆ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ರಾಜು ಹೆಬ್ಬಾಳ ಸೇರಿ ಅನೇಕರು ಹಾಸ್ಯದ ಚಟಾಕಿ ಸಿಡಿಸುವ ಮೂಲಕ ವಿದ್ಯಾರ್ಥಿಗಳು ನಕ್ಕು ನೀರಾದರು. ಕಾರ್ಯಕ್ರಮದಲ್ಲಿ ನ್ಯಾಯಾವಾದಿ ಹಣಮಂತರಾಯ ಅಟ್ಟೂರ್, ಸಂಗೀತ ಕಲಾವಿದರಾದ ಶ್ರವಣಕುಮಾರ ಎಸ್. ಮಠ, ರಾಜು ಹೆಬ್ಬಾಳ, ಉಪನ್ಯಾಸಕಿಯರಾದ ಪ್ರಿಯಾಂಕಾ ಕರಣಿಕ ಸೇರಿ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು. ರವಿ ಶಹಾಪುರಕರ್ ನಿರೂಪಿಸಿದರು, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ವಂದಿಸಿದರು.