ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅಸಿಂಧು, ಸಂತೋಷ ಸುಗಂಧಿ ಅಮಾನತು, ಇದು ಸಂವಿಧಾನ ವಿರೋಧಿ ಕ್ರಮ ಎಂದ ನೂತನ ಅಧ್ಯಕ್ಷ ವಿಶ್ವರಾಜ ನೆನೆಕ್ಕಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಿಯಮ ಬಾಹಿರವಾಗಿ ನಡೆದ ಚಿತ್ತಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅಸಿಂಧುಗೊಳಿಸಿ ಸೇಡಂ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ಚುನಾವಣೆ ನಿಗದಿಪಡಿಸಿ ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ವೇಳಾಪಟ್ಟಿ ಹೊರಡಿಸಲಾಗಿತ್ತು. ಆದರೆ, ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಚುನಾವಣೆಯನ್ನು ಮುಂದೂಡಲು ರಿಟರ್ನಿಂಗ್ ಅಧಿಕಾರಿಗಳು ಕೋರಿದ್ದರು. ಈ ವಿಷಯ ಕುರಿತು ಸಹಕಾರ ಸಂಘಗಳ ಉಪ ನಿಬಂಧಕರು ಕಲಬುರಗಿ ಇವರಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಈ ವಿಷಯದ ಮುಂದಿನ ಕ್ರಮದ ಕುರಿತು ಸೂಕ್ತ ಮಾರ್ಗದರ್ಶನ ನೀಡಲು ಆಯುಕ್ತರು ಸಹಕಾರ ಚುನಾವಣಾ ಪ್ರಾಧಿಕಾರ ಬೆಂಗಳೂರು ಇವರಿಗೆ ಕೋರಲಾಗಿತ್ತು.
ಈ ಮಧ್ಯೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಸುಗಂಧಿ ಎನ್ನುವವರು ತಾವೇ ಸಹಾಯಕ ರಿಟರ್ನಿಂಗ್ ಅಧಿಕಾರಿ ಎಂದು ತಿಳಿಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಿದ್ದಾರೆ.
ಇದು ಸಹಕಾರ ಸಂಘಗಳ ಕಾಯಿದೆ 1959 ಹಾಗೂ ನಿಯಮಾವಳಿ 1960ರನ್ವಯ ಸಂಘದ ಚುನಾವಣೆ ಕಲಂ 39 ಎ ಮತ್ತು 398 ಎಎ ರಡಿ ನಿಗದಿಪಡಿಸಿದಂತೆ ಸಹಕಾರ ಚುನಾವಣೆ ಆಯೋಗದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಆದರೆ, ನಿಯಮಾವಳಿಯಂತೆ ಅಧಿಕಾರಿಸಲ್ಪಟ್ಟ ರಿಟರ್ನಿಂಗ್ ಅಧಿಕಾರಿ, ಸಹಾಯಕ ರಿಟರ್ನಿಂಗ್ ಅಧಿಕಾರಿ ಜರುಗಿಸಬೇಕಾದ ಚುನಾವಣೆಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಸಹಾಯಕ ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆ ನಡೆಸಿದ್ದಾರೆ.
ನಿಯಮಗಳ ಪ್ರಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಸಹಾಯಕ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರ ಸಂಘಗಳ ಕಾಯಿದೆ 1959 ಹಾಗೂ ನಿಯಮಾವಳಿಗಳು 1960 ರಡಿ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನುಬಾಹಿರವಾಗಿ ನಡೆದ ಚುನಾವಣೆ ಅಸಿಂಧುವಾಗಿದೆ ಎಂದು ಸಹಕಾರ ಸಂಘಗಳ ಸೇಡಂ ಉಪ ವಿಭಾಗದ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
ಸಂತೋಷ ಸುಗಂಧಿ ಅಮಾನತು: ಸಹಾಯಕ ರಿಟರ್ನಿಂಗ್ ಅಧಿಕಾರಿ ಎಂದು ನಿಯಮಗಳನ್ನು ಮೀರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ನಡೆಸಿ ಕರ್ತವ್ಯ ಲೋಪ ಎಸಗಿದ ಚಿತ್ತಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಸುಗಂಧಿ ಅವರನ್ನು ಸಹಕಾರ ಅಭಿವೃದ್ಧಿ ಅಧಿಕಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸಂವಿಧಾನ ವಿರೋಧಿ ಕ್ರಮ: ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳಾಪಟ್ಟಿ ಹೊರಡಿಸಿ ಗೈರು ಆಗಿದ್ದ ಚುನಾವಣಾಧಿಕಾರಿ ದತ್ತಾತ್ರೇಯ ಅವರನ್ನು ಅಮಾನತು ಮಾಡಬೇಕಾದ ಸಹಕಾರ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಸಂತೋಷ್ ಸುಗಂಧಿ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ, ನಿಯಮದಂತೆ ಚುನಾವಣೆ ನಡೆದಿದೆ ಆದರೂ ಇದನ್ನು ಅಸಿಂಧು ಎಂದು ಹೇಳಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಸಂಘದ ಅಧ್ಯಕ್ಷ (ಬಿಜೆಪಿ ಬೆಂಬಲಿತ) ವಿಶ್ವರಾಜ ಹೊನ್ನಪ್ಪ ನೆನೆಕ್ಕಿ ತಿಳಿಸಿದ್ದಾರೆ.
ಈ ಕುರಿತು ಇನ್ನೂ ನಮಗೆ ನೋಟಿಸ್ ಬಂದಿಲ್ಲ, ನಮ್ಮ ಪಕ್ಷದ ಹೈಕಮಾಂಡ್ ಮಾರ್ಗದರ್ಶನದಲ್ಲಿ ಮುಂದಿನ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
12 ಸದಸ್ಯರ ಪೈಕಿ 10 ಜನ ಸದಸ್ಯರು ಹಾಜರಿದ್ದು ಕೋರಂ ಭರ್ತಿ ಇದ್ದ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡೇ ನಾಮಪತ್ರಗಳು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.