ಯಡ್ರಾಮಿ ಬಾಲಕಿ ಅತ್ಯಾಚಾರ ಖಂಡಿಸಿ ಬಂಜಾರ ಸಮಾಜದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ, ಆರೋಪಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಜಿಲ್ಲೆಯ ಯಡ್ರಾಮಿಯಲ್ಲಿ 11 ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ಮನುಕುಲ ತಲೆತಗ್ಗಿಸುವಂತಹ ಘಟನೆಯಾಗಿದೆ ಇದನ್ನು ಬಂಜಾರ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.
ರಾಕ್ಷಸಿ ಪ್ರವೃತ್ತಿ ಹೊಂದಿರುವ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾದಾಗ ಮಾತ್ರ ಮಹಿಳೆಯರಿಗೆ ಸುರಕ್ಷೆ ಸಿಗಬಹುದು. ಯಡ್ರಾಮಿ ಪ್ರಕರಣದಲ್ಲಿ ಕಾರಣೀಭೂತನಾಗಿರುವ ಆರೋಪಿಯ ಮೇಲೆ ಅನೇಕ ಆರೋಪಗಳಿವೆ, ಅವುಗಳ ತನಿಖೆಯಾಗಬೇಕು. ಸದರಿ ಆರೋಪಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಯಡ್ರಾಮಿ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಸತ್ಯ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಸದರಿ ಆರೋಪಿ ಇಂತಹ ಅನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗುತ್ತಿದ್ದು, ಉನ್ನತ ಮಟ್ಟದ ವಿಸ್ತ್ರತ ತನಿಖೆ ನಡೆಸಬೇಕು, ಮಾನಸಿಕ ಹಿಂಸೆಯಿಂದ ಜರ್ಜರಿತರಾಗಿರುವ ಸಂತ್ರಸ್ಥ ಬಡ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ, ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ, ಮಾಜಿ ಸದಸ್ಯರಾದ ವಿಠಲ್ ಜಾಧವ, ರವಿ ರಾಠೋಡ, ತಾಪಂ ಮಾಜಿ ಸದಸ್ಯರಾದ ನಾರಾಯಣ ಪವಾರ, ನಾಮದೇವ ರಾಠೋಡ, ಚಿತ್ತಾಪುರ ಬಂಜಾರ ಸಮಾಜದ ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಯುವ ಅಧ್ಯಕ್ಷ ಜಗದೀಶ್ ಚವ್ಹಾಣ, ಸುಭಾಷ್ ಪವಾರ, ಕಿಶನ್ ರಾಠೋಡ, ರವಿ ಜಾಧವ ಇತರರು ಇದ್ದರು.