ಮುಡಬೂಳ ರಸ್ತೆಯಲ್ಲಿ ಮರಳು ಸಾಗಣೆ ಟಿಪ್ಪರಗಳ ದರ್ಬಾರ್, ಭಯದ ಭೀತಿಯಲ್ಲಿ ಗ್ರಾಮಸ್ಥರು, ಟಿಪ್ಪರಗಳ ಮಾರ್ಗ ಬದಲಾಯಿಸಲು ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮುಡಬೂಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೀತಿ ಮೀರಿದ ಮರಳು ತುಂಬಿದ ಟಿಪ್ಪರ್ ಗಳ ದರ್ಬಾರ್ ದಿಂದ ಗ್ರಾಮಸ್ಥರು ಭಯದ ಭೀತಿಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಟಿಪ್ಪರಗಳ ಓಡಾಟದ ಮಾರ್ಗ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾಗೋಡಿ ಮುಡಬೂಳ ಗ್ರಾಮದ ವ್ಯಾಪ್ತಿಯಲ್ಲಿ ಐದಾರು ಮರಳು ದಕ್ಕಾಗಳಿವೆ, ಮುಖ್ಯ ರಸ್ತೆಯಿಂದ ಮರಳು ಇರುವ ಸ್ಥಳಕ್ಕೆ ಹೋಗಲು ರಸ್ತೆ ನಿರ್ಮಾಣ ಮಾಡುವುದಕ್ಕೆ ನಿತ್ಯ ಖಣಿಯಲ್ಲಿನ ಚೂರು ಕಲ್ಲು ಮತ್ತು ದೊಡ್ಡ ಗಾತ್ರದ ಕಲ್ಲುಗಳನ್ನು ತುಂಬಿ ಬರುವ ಟಿಪ್ಪರಗಳು ವೇಗದಿಂದ ಚಲಿಸುವಾಗ ಟಿಪ್ಪರ್ ನಲ್ಲಿನ ಕಲ್ಲುಗಳು ಹೊರ ಬೀಳುತ್ತವೆ ಇವು ಚಿಡಿದು ರಸ್ತೆ ಪಕ್ಕದಲ್ಲಿ ಸಂಚರಿಸುವ ಪಾದಚಾರಿಗಳಿಗೆ ತಾಗಿ ಅನಾಹುತಗಳು ಸಂಭವಿಸಿವೆ ಇದರಿಂದ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ ಎಂದು ಮುಡಬೂಳ ಗ್ರಾಮಸ್ಥ ಮಲ್ಲಿನಾಥ ಸಂಗಾವಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
50 ಟನ್ ಅಧಿಕ ಮರಳು ತುಂಬಿದ ಟಿಪ್ಪರಗಳು ಗ್ರಾಮದ ಹತ್ತಿರ ನಿಧಾನವಾಗಿ ಚಲಿಸಿದೇ ಅತಿ ವೇಗವಾಗಿ ಚಲಿಸುತ್ತವೆ ಇದರಿಂದ ರಸ್ತೆಯಲ್ಲಿ ಸಂಚರಿಸುವ ಹಾಗೂ ರಸ್ತೆ ಹಾದು ಹೋಗುವ ಸಾರ್ವಜನಿಕರಿಗೆ ಆತಂಕವನ್ನುಂಟು ಮಾಡಿದೆ, ವೇಗವಾಗಿ ಚಲಿಸುವುದರಿಂದ ರಸ್ತೆಯ ದೂಳು ಮನೆಯೊಳಗೆ ಹಾಗೂ ರಸ್ತೆ ಪಕ್ಕದ ಹೊಲಗಳಿಗೆ ತಾಗಿ ಜನರ ಆರೋಗ್ಯ ಹಾಗೂ ಹೊಲದಲ್ಲಿನ ಬೆಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಒಂದು ರಾಯಲ್ಟಿ ತೆಗೆದು 8 ರಿಂದ 10 ಟಿಪ್ಪರ್ ಅಕ್ರಮ ಮರಳು ಸಾಗಣೆ ಮಾಡುವ ಕಳ್ಳ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ರಸ್ತೆಯಲ್ಲಿ ನಿತ್ಯ ನೂರಾರು ಟಿಪ್ಪರ್ ಮರಳು ಸಾಗಣೆ ಮತ್ತು ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಆದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ.
“ಭಾಗೋಡಿ ದಿಂದ ಮುಡಬೂಳ ಸೇರಿದಂತೆ ಚಿತ್ತಾಪುರ ರಸ್ತೆಯಲ್ಲಿ 45-50 ಟನ್ ಮರಳು ತುಂಬಿದ ಟಿಪ್ಪರ್ ಗಳು ಓಡಾಟದಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಇದರಿಂದ ಈಗಾಗಲೇ ಅನೇಕ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ. ಶಾಲಾ ಮಕ್ಕಳು, ವೃದ್ದರು ಮತ್ತು ಮಹಿಳೆಯರು ಓಡಾಡಲು ಬಹು ಕಷ್ಟವಾಗಿದೆ ಹೀಗಾಗಿ ಜನರ ಹಾಗೂ ರೈತರ ಬೆಳೆಗಳ ರಕ್ಷಣೆಯ ಹಿತದೃಷ್ಟಿಯಿಂದ ಟಿಪ್ಪರಗಳು ಭಾಗೋಡಿ ಗುಂಡಗುರ್ತಿ ಮಾರ್ಗದ ಮೂಲಕ ಟಿಪ್ಪರ್ ಸಂಚರಿಸುವ ಕ್ರಮ ಕೈಗೊಳ್ಳಬೇಕು”.- ಮಲ್ಲಿನಾಥ ಸಂಗಾವಿ ಮುಡಬೂಳ, ಟಿಪ್ಪರ್ ಅನಾಹುತಕ್ಕೆ ಒಳಗಾದ ರೈತ.