Oplus_0

ತಡಕಲನಲ್ಲಿ ದಿ. ರುಕ್ಮಯ್ಯ ಗುತ್ತೇದಾರರ 12ನೇ ಪುಣ್ಯಸ್ಮರಣೆ, ರೈತ ದಿನಾಚರಣೆ, ಧರ್ಮಸಭೆ, 5 ಜನ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ

ನಾಗಾವಿ ಎಕ್ಸಪ್ರೆಸ್

ಆಳಂದ: ಜಲ ಸಂರಕ್ಷಣೆಗಾಗಿ ಕೆರೆ ನಿರ್ಮಾಣ, ಈಗಾಗಲೇ ಇರುವ ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂ ಹಾಗೂ ಕೃಷಿ ಹೊಂಡಗಳ ನಿರ್ಮಾಣ ಹಾಗೂ ನಿರ್ವಹಣೆ ಸೇರಿದಂತೆ ಜಲ ಮರುಪೂರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಇದರಲ್ಲಿ ಸಾರ್ವಜನಿಕರೂ ಸ್ವಯಂ ಪ್ರೇರಿತರಾಗಿ ಜಲ ಸಂರಕ್ಷಣೆ ಹಾಗೂ ಮರುಪೂರಣ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಚಿತ್ರದುರ್ಗದ ಜಲತಜ್ಞ ಡಾ. ದೇವರಾಜರೆಡ್ಡಿ ಅಭಿಪ್ರಾಯಪಟ್ಟರು.

ತಾಲೂಕಿನ ತಡಕಲ್ ಗ್ರಾಮದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಆವರಣದಲ್ಲಿ ಸೋಮವಾರ ಜರುಗಿದ ದಿ. ರುಕ್ಮಯ್ಯ ಗುತ್ತೇದಾರರ 12ನೇ ಪುಣ್ಯಸ್ಮರಣೆ, ರೈತ ದಿನಾಚಾರಣೆ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು.

ರೈತರುಗಳ ಖಾಸಗಿ ಜಮೀನು, ಸಮುದಾಯ ಅಥವಾ ಸರ್ಕಾರಿ ಗೋಮಾಳಗಳಲ್ಲಿ 1 ರಿಂದ 2 ಅಡಿ ಅಂತರದಲ್ಲಿ 1×1 ಅಗಲ ಮತ್ತು 4 ಅಡಿ ಆಳದ ಗುಂಡಿಗಳನ್ನು ತೋಡುವ ಮೂಲಕ ಮಳೆ ನೀರು ಇಲ್ಲಿ ಸಂಗ್ರಹವಾಗುವಂತೆ ಮಾಡಬೇಕು ಹೀಗೆ ಗುಂಡಿಗಳಲ್ಲಿ ಸಂಗ್ರಹವಾದ ನೀರನ್ನು ರೈತರು ತಮ್ಮ ಬೆಳೆಗಳಿಗೆ ಬಳಸಿಕೊಳ್ಳುವ ಜೊತೆಗೆ ನೀರು ನಿರಂತರವಾಗಿ ಅಲ್ಲಿಯೇ ನಿಂತಿರುವುದರಿಂದ ಇಂಗಿದ ನೀರು ಅಂತರ್ಜಲ ಸೇರುವ ಮೂಲಕ ಅಂತರ್ಜಲ ಹೆಚ್ಚಳಕ್ಕೂ ಸಹಕಾರಿಯಾಗಿದೆ ಎಂದರು.

ಮನೆಗಳ ಸುತ್ತಲಿನ 1 ಅಥವಾ 2 ಕಿ.ಮೀ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರಿನ ಹರಿವು ಈ ನಾಲಾ ಬದುವಿಗೆ ಬಂದು ಸೇರುವಂತೆ ವ್ಯವಸ್ಥೆ ಮಾಡಬೇಕು. ಲಭ್ಯವಿರುವ ರೈತರ ಭೂಮಿ ಅಥವಾ ಸರ್ಕಾರಿ ಜಾಗಗಳಲ್ಲಿ ಬೃಹತ್ತಾದ ಕಟ್ಟೆಯಂತಹ ಬದುವೊಂದನ್ನು ನಿರ್ಮಿಸಿ ಅತಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಬೇಕು ಇಲ್ಲಿ ಸಂಗ್ರಹವಾದ ನೀರನ್ನು ಸುಮಾರು 15 ರಿಂದ 20 ರೈತರು ತಮ್ಮ ತೋಟಗಳಿಗೆ/ಬೆಳೆಗಳಿಗೆ ಬಳಸಿಕೊಳ್ಳಬಹುದಾಗಿದ್ದು, ಜಾನುವಾರುಗಳು ಸಹ ಈ ನೀರನ್ನು ಕುಡಿಯಬಹುದಾಗಿರುತ್ತದೆ. ಇದೊಂದು ಬೃಹತ್ ಕಟ್ಟೆಯ ರೀತಿಯಲ್ಲಿರುವುದರಿಂದ ಇದರಲ್ಲಿ ಸಂಗ್ರಹವಾದ ನೀರು ಹಲವು ದಿನಗಳವರೆಗೆ ಶೇಖರಣೆಯಾಗಿ ಕ್ರಮೇಣ ಇಂಗಿ ಅಂತರ್ಜಲ ಸೇರಿಕೊಳ್ಳುವುದರಿಂದ ಸುತ್ತಮುತ್ತಲಿನ ಅಂತರ್ಜಲ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಿದೆ ತಿಳಿಸಿದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಹಿಂದಿನಿಂದಲೂ ಗ್ರಾಮಗಳನ್ನು ಸುಭೀಕ್ಷವಾಗಿಡಲು ಪಾರಂಪರಿಕವಾಗಿ ನಿರ್ಮಾಣ ಮಾಡಿರುವ ಕೆರೆಗಳು ಮಾನವನ ದುರಾಸೆಯಿಂದ ಅಳಿವಿನಂಚಿಗೆ ತಲುಪಿವೆ. ಅತಿಯಾದ ಒತ್ತುವರಿಯಿಂದಾಗಿ ಎಕರೆಗಳಷ್ಟಿದ್ದ ಕರೆಗಳು ಗುಂಟೆಗಳಲ್ಲಿವೆ. ಇದರಿಂದಾಗಿ ನೀರಿನ ಶೇಖರಣೆಯ ಪ್ರಮಾಣ ಕುಗ್ಗಿ ಹೋಗಿದ್ದು, ಇಂತಹ ಕೆರೆಗಳ ಪುನಶ್ಚೇತನಕ್ಕೂ ಕ್ರಮ ವಹಿಸಬೇಕು. ಒತ್ತುವರಿ ತೆರವು ಮತ್ತು ಹೂಳನ್ನು ತೆಗೆಯುವ ಮೂಲಕ ನೀರಿನ ಒಳಹರಿವಿಗೆ ಆದ್ಯತೆ ನೀಡಬೇಕು ಇದರ ಜೊತೆಗೆ ಕೆರೆಗಳಿಗೆ ನೀರು ತುಂಬಿಸುವುದರ ಮೂಲಕ ಬತ್ತಿಹೋಗಿದ್ದ ಸುತ್ತಮುತ್ತಲಿನ ಬೋರ್‍ವೆಲ್‍ಗಳಿಗೆ ಅಂತರ್ಜಲ ಮರುಪೂರಣ ಮಾಡುವ ಮೂಲಕ ಮರುಜೀವ ನೀಡಬೇಕು ಇದರ ಜೊತೆಗೆ ಬಿಸಿಲ ಬೇಗೆಯಲ್ಲಿ ಜಾನುವಾರುಗಳ ದಾಹ ಇಂಗಿಸಲು ಕೆರೆಗಳು ಪೂರಕವಾಗುವಂತೆ ಮಾಡಬೇಕು ಎಂದು ನುಡಿದರು..

ಕೃಷಿ ಹೊಂಡಗಳನ್ನು ಸಾಮಾನ್ಯವಾಗಿ ರೈತರ ಜಮೀನಿನಲ್ಲಿ 3000-4000 ಲೀ ಸಾಮರ್ಥ್ಯಶನ್ನು ಹೊಂದುವ ರೀತಿಯಲ್ಲಿ ಜಾಗದ ಲಭ್ಯತೆಗನುಗುಣವಾಗಿ ನಿರ್ಮಾಣ ಮಾಡಬೇಕು ಇದರಿಂದಾಗಿ ರೈತರು ತಾವು ಬೆಳೆದ ಬೆಳೆಗಳಿಗೆ ಸಕಾಲದಲ್ಲಿ ನೀರು ಹರಿಸುವುದರಿಂದ ಬೆಳೆಗಳನ್ನು ಕಾಪಾಡಿಕೊಳ್ಳಬಹುದಾಗಿದೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಇದು ಸಹಕಾರಿಯಾಗಿದ್ದು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಹಿಡಿದಿಡಲು ಸಹಕಾರಿಯಾಗಿದೆ ಎಂದು ಹೇಳಿದರು.

ಮಾದನಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮಿಗಳು ಮಾತನಾಡಿ, ಜಲ ಸಂರಕ್ಷಣೆ ಕೇವಲ ಸರ್ಕಾರಗಳ ಜವಾಬ್ದಾರಿಯಾಗಿರದೆ ಪ್ರತಿಯೊಬ್ಬ ಮಾನವನ ಕರ್ತವ್ಯವೂ ಆಗಿದೆ. ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ ಮತ್ತು ಅಂತರ್ಜಲ ಹೆಚ್ಚಿಸುವ ಕೆಲಸಕ್ಕೆ ಪ್ರತಿಯೊಬ್ಬ ನಾಗರಿಕನೂ ಇಂದೇ ಕೈಜೋಡಿಸಲಿ. ನೀರನ್ನು ಮಿತವಾಗಿ ಬಳಸಿ ಜಲ ಸಾಕ್ಷರರಾಗುವ ಮೂಲಕ ಇದನ್ನು ಸಾಕಾರಗೊಳಿಸಲಿ ಎಂದು ಆದೇಶಿಸಿದರು.

ಕಾರ್ಯಕ್ರಮದಲ್ಲಿ ನಂದಗಾಂವದ ರಾಜಶೇಖರ ಮಹಾಸ್ವಾಮೀಜಿ ಆಶೀವರ್ಚನ ನೀಡಿದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಮುತ್ಯಾನ ಬಬಲಾದನ ಗುರುಪಾದಲಿಂಗ ಮಹಾಸ್ವಾಮಿ, ಮಾಡಿಯಾಳದ ಒಪ್ಪತ್ತೇಶ್ವರ ಸ್ವಾಮೀಜಿ, ಮಾದನಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ, ಶಾಂತವೀರ ಶಿವಾಚಾರ್ಯರು, ಚಿಣಮಗೇರಿಯ ವೀರಮಹಾಂತ ಶಿವಾಚಾರ್ಯರು, ಯಳಸಂಗಿಯ ಪರಮಾನಂದ ಸ್ವಾಮಿ, ಕೇಸರ ಜವಳಗಾದ ವೀರಂತೇಶ್ವರ ಶಿವಾಚಾರ್ಯರು, ಕಿಣ್ಣಿಸುಲ್ತಾನದ ಶಿವಶಾಂತಲಿಂಗ ಶಿವಾಚಾರ್ಯರು, ಆಳಂದನ ಸಿದ್ದೇಶ್ವರ ಶಿವಾಚಾರ್ಯರು, ಚೆನ್ನಬಸವ ಪಟ್ಟದೇವರು, ನಿಂಬರ್ಗಾದ ಶಿವಲಿಂಗ ದೇವರು, ತಡಕಲನ ಸಿದ್ಧಮಲ್ಲ ಶಿವಾಚಾರ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕಿನ 5 ಜನ ಪ್ರಗತಿಪರ ರೈತರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಹರ್ಷಾ ಗುತ್ತೇದಾರ, ಸಂತೋಷ ಗುತ್ತೇದಾರ, ಹಿರಿಯ ಮುಖಂಡರಾದ ವೀರಣ್ಣಾ ಮಂಗಾಣೆ, ಆನಂದರಾವ ಗಾಯಕವಾಡ, ಮಾಣಿಕ ಜಾಧವ, ಮಲ್ಲಿಕಾರ್ಜುನ ತಡಕಲ್ ಸೇರಿದಂತೆ ಸುಭಾಷ ಗುತ್ತೇದಾರರ ಸಾವಿರಾರು ಅಭಿಮಾನಿಗಳು ಹಾಗೂ ಗುತ್ತೇದಾರ ಪರಿವಾರದವರು ಭಾಗವಹಿಸಿದ್ದರು. ಹಿರಿಯ ಸಾಹಿತಿ ಅಪ್ಪಾಸಾಹೇಬ ಗುಂಡೆ ಕಾರ್ಯಕ್ರಮ ನಿರ್ವಹಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!