ನಮ್ಮ ನಡೆ ಶಾಲೆ ಕಡೆ ವಿನೂತನ ಕಾರ್ಯಕ್ರಮ, ವಿದ್ಯೆಯಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯ: ಬಸವರಾಜ ಮತ್ತಿಮುಡ್

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಯಾವುದೇ ವ್ಯಕ್ತಿಯ ಜೀವನದಲ್ಲಿ ವಿದ್ಯೆಯ ಪಾತ್ರ ಮಹತ್ತರವಾಗಿದೆ, ವಿದ್ಯೆಯಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ ಎಂದುಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಹೇಳಿದರು.

ನಗರದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರಿ ಬಾಲಕರ ಪ್ರೌಢಶಾಲೆ ಯಲ್ಲಿ ಹಮ್ಮಿಕೊಂಡಿದ್ದ ನಮ್ಮ ನಡೆ ಶಾಲೆ ಕಡೆ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಮಾರ್ಗದರ್ಶನ ಪಡೆದು ಗುರಿ ಮುಟ್ಟಬೇಕು, ಜ್ಞಾನ ಸಂಪತ್ತು ಭೌತಿಕ ಸಂಪತ್ತಿಗಿಂತ ಶ್ರೇಷ್ಠವಾದದ್ದು, ಶಿಕ್ಷಣದಿಂದ ಮೇಲೆ ಬಂದ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ರೀತಿಯಲ್ಲಿ ಬೆಳೆಯಬೇಕು ಎಂದು ಹೇಳಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಪ್ಪ ಮಾಸ್ಟರ ಬೆಳಮಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಥಮಿಕ ಹಂತದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ಈ ನಿಟ್ಟಿನಲ್ಲಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಮ್ಮ ನಡೆ ಶಾಲೆ ಕಡೆ ಮೂಲಕ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಮೂಲ ಸೌಕರ್ಯಗಳು, ಶಾಲಾ ಕೊಠಡಿ, ಆಟದ ಮೈದಾನ, ಬಿಸಿಯೂಟದ ಯೋಜನೆ, ಶೌಚಾಲಯ, ಭದ್ರತೆ, ಶಿಕ್ಷಣದ ಗುಣಮಟ್ಟಗಳ ಬಗ್ಗೆ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರ ಹಾಗೂ ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಶಿಧರ್ ಬಿರಾದಾರ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ, ನಿವೃತ್ತ ಶಿಕ್ಷಕ ಡಾ.ಕೆ.ಎಸ್. ಭಂದು ಮಾತನಾಡಿದರು.

ವೇದಿಕೆ ಮೇಲೆ ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳುಗೋಳಕರ್, ಡಿಎಂಎಸ್ಎಸ್ ಅಧ್ಯಕ್ಷ ಶಿವರಾಜ ಕೋರೆ, ಪ್ರೌಢಶಾಲೆಯ ಮುಖ್ಯ ಗುರು ಪ್ರತಿಭಾ ಪ್ರಿಯದರ್ಶಿನಿ ಹಾಗೂ ಹೇಮನಾಥ್ ರಾಠೋಡ, ಕೂಡಲಸಂಗಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಸಿ. ವಾರದ್, ಸಿ.ಆರ್.ಸಿ ಸತ್ಯನಾರಾಯಣ ಇದ್ದರು.

ಕಾರ್ಯಕ್ರಮದಲ್ಲಿ ನಾಗಪ್ಪ ರಾಯಚೂರಕರ, ರವಿ ಬೆಳಮಗಿ, ವಿಶ್ವನಾಥ ಚಿತ್ತಾಪುರ, ರಾಜೇಶ ಮಸ್ಕಿ, ಬಸವರಾಜ ನಡುವಿನಕೇರಿ, ಅಯ್ಯಪ್ಪ, ದೌಲಪ್ಪ ಕಟ್ಟಿಮನಿ ಹಾಗೂ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕಿ ಆಗ್ರಾ ಸುಲ್ತಾನ ಸ್ವಾಗತಿಸಿ, ನಿರೂಪಿಸಿದರು, ರಮೇಶ್ ಬೆಳಮಗಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!