ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವುದು ಖಂಡನೀಯ: ಸಾಬಣ್ಣ ಕಾಶಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಡೆತ್ ನೋಟ್ ನಲ್ಲಿ ಪ್ರಿಯಾಂಕ ಖರ್ಗೆ ಅವರ ಹೆಸರೇ ಇಲ್ಲ ಆದರೂ ಬಿಜೆಪಿ ಮುಖಂಡರು ರಾಜೀನಾಮೆ ಕೇಳುತ್ತಿರುವುದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಸಾಬಣ್ಣ ಕಾಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಚಿನ್ ಪಾಂಚಾಳ ಸಾವಿನಲ್ಲಿ ಪ್ರಿಯಾಂಕ ಖರ್ಗೆಯವರ ಯಾವುದೇ ಕೈವಾಡ ಇರುವುದಿಲ್ಲ. ಆದರೂ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರವರು ಜನವರಿ 4 ರಂದು ಕಲಬುರಗಿಯ ಪ್ರಿಯಾಂಕ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಲಾಗುವುದು ಎಂದು ಹೇಳಿದ್ದಾರೆ.
ಸಚಿನ್ ಪಾಂಚಾಳ ಡೆತ್ ನೋಟ್ ನಲ್ಲಿ ಕೆಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿದ್ದ ವ್ಯಕ್ತಿ ಸಚಿವರ ಆಪ್ತ ರಾಜು ಕಪನೂರ ಎನ್ನುವ ಕಾರಣಕ್ಕೆ ಸಚಿವರು ರಾಜೀನಾಮೆ ಕೊಡಬೇಕಾ? ಪ್ರಿಯಾಂಕ್ ಖರ್ಗೆ ಅವರಿಗೆ ಸಾವಿರಾರು ಅಲ್ಲ ಲಕ್ಷಾಂತರ ಅಭಿಮಾನಿಗಳು, ಆಪ್ತರಿದ್ದಾರೆ ಹೀಗಾಗಿ ಬಿಜೆಪಿಯವರಿಗೆ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವ ಯಾವುದೇ ನೈತಿಕತೆ ಇಲ್ಲ ಎಂದರು.
ಸಚಿವ ಪ್ರಿಯಾಂಕ ಖರ್ಗೆರವರು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ ಎಂದು ಈಗಾಗಲೇ ಸಚಿವರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಸಚಿವರ ಕೈವಾಡ ಇದ್ದರೆ ಅವರೇಕೆ ಸಿಐಡಿ ತನಿಖೆಗೆ ಪತ್ರ ಬರೆಯುತ್ತಿದ್ದರು ಎನ್ನುವುದನ್ನು ಬಿಜೆಪಿಯವರು ಮೊದಲು ಅರ್ಥ ಮಾಡಿಕೊಳ್ಳಿ. ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಳವಣಿಗೆ ಸಹಿಸಿಕೊಳ್ಳದ ಬಿಜೆಪಿಯವರು ವೃತ ಟೀಕೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಬಿಜೆಪಿಯವರು ವೃತ ಪ್ರತಿಭಟನೆ ಮಾಡಿದರೆ ನಾವು ಕೂಡ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ