ಶಹಾಬಾದ ನಗರದಲ್ಲಿ ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಎಸ್ ಯುಸಿಐ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಬಸ್ ಟಿಕೆಟ್ ದರವನ್ನು ಶೇ.15 ರಷ್ಟು ಏರಿಕೆ ಮಾಡಿದ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಾಗಿದೆ ಎಂದು ಎಸ್.ಯು.ಸಿ.ಐ (ಸಿ) ಕಾರ್ಯದರ್ಶಿ ಗಣಪತರಾವ್ ಕೆ.ಮಾನೆ ಆರೋಪಿಸಿದ್ದಾರೆ.
ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ಈಗಾಗಲೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಚಾರ ಇನ್ನೂ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ರಾಜ್ಯ ಸರ್ಕಾರವು ಏಕಾಏಕಿ ರಾಜ್ಯ ಬಸ್ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡಿರುವುದನ್ನು ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್) ಎಸ್.ಯು.ಸಿ.ಐ (ಸಿ) ಉಗ್ರವಾಗಿ ಖಂಡಿಸುತ್ತದೆ ಎಂದರು.
ಪಕ್ಷದ ಸದಸ್ಯ ರಾಘವೇಂದ್ರ ಎಂ.ಜಿ ಮಾತನಾಡಿ, ಶಕ್ತಿ ಯೋಜನೆಯ ನಂತರ ಬಸ್ಸಿನಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆಯು ಹೆಚ್ಚಾದಾಗ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿ, ಚಾಲಕ-ನಿರ್ವಾಹಕರನ್ನು ನೇಮಕಾತಿ ಮಾಡಿಕೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಬದಲಾಗಿ ಏಕಾಏಕಿ ಬಸ್ಸಿನ ಪ್ರಯಾಣ ದರವನ್ನು ಹೆಚ್ಚಳ ಮಾಡಿರುವುದು ಅತ್ಯಂತ ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಕೊಟ್ಟಂತೆ ಮಾಡಿ, ಮತ್ತೊಂದೆಡೆ ಕಸಿದುಕೊಳ್ಳುವ ಸರ್ಕಾರದ ಈ ನಡೆಯು ಜನಾಕ್ರೋಶಕ್ಕೆ ಕಾರಣವಾಗಿದ್ದು, ಜನರ ಜೇಬಿಗೆ ಕತ್ತರಿ ಹಾಕುವ ಈ ನಿರ್ಧಾರದಿಂದ ಸರ್ಕಾರವು ಈ ಕೂಡಲೇ ಹಿಂದೆ ಸರಿಯಬೇಕು. ಹಾಗೂ ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ಬಸ್ಸುಗಳನ್ನು ಓಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಜನರ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಅನಿವಾರ್ಯವಾಗಿ ಜನರನ್ನು ಸಂಘಟಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗುಂಡಮ್ಮ ಮಡಿವಾಳ, ರಾಜೇಂದ್ರ ಅತನೂರ, ರಮೇಶ್ ದೇವಕರ್, ರಘು ಪವಾರ, ಸಿದ್ದು ಚೌದ್ರಿ, ಮಹಾದೇವಿ ಮಾನೆ, ಮಹಾದೇವಿ ಅತನೂರ, ರಾಧಿಕಾ ಚೌದ್ರಿ, ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.