ಬಿಜೆಪಿಯವರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ಡಿಎಸ್ಎಸ್ ಖಂಡನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ವಿನಾಕಾರಣ ಆರೋಪ ಮಾಡುತ್ತಾ ಇವರ ಏಳಿಗೆಯನ್ನು ಸಹಿಸದ ಬಿಜೆಪಿ ನಾಯಕರು ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ಜಿಲ್ಲಾ ಸಂಘಟನಾ ಸಂಚಾಲಕ ರಮೇಶ್ ಕವಡೆ ಹೇಳಿದರು.
ಪಟ್ಟಣದ ಬುಧ್ಧ ವಿಹಾರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಯಾವುದೇ ಕೈವಾಡ ಇಲ್ಲ ಮತ್ತು ಡೆತ್ ನೋಟ್ ನಲ್ಲಿ ಅವರ ಹೆಸರು ಕೂಡ ಇಲ್ಲ ಆದರೂ ಬಿಜೆಪಿ ಮುಖಂಡರು ದಿನನಿತ್ಯ ಒಂದಿಲ್ಲೊಂದು ಪ್ರತಿಭಟನೆ ಮಾಡುತ್ತಿದಾರೆ ಇದು ಇಲ್ಲಿಗೆ ನಿಲ್ಲಿಸಬೇಕು ಇಲ್ಲದಿದ್ದರೆ ಪ್ರತಿಯಾಗಿ ಬಿಜೆಪಿ ಮುಖಂಡರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಪ ವಿಭಾಗೀಯ ಸಂಚಾಲಕ ಉದಯಕುಮಾರ ಸಾಗರ ಮಾತನಾಡಿ, ಸಚಿನ್ ಪಾಂಚಾಳ ಆತ್ಮಹತ್ಯೆ ನೆಪವಾಗಿಟ್ಟುಕೊಂಡು ಬಿಜೆಪಿ ಅವರು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ, ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ಸಿಐಡಿ ತನಿಖೆಗಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ, ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ ಅಲ್ಲಿವರೆಗೆ ಕಾಯಿರಿ ವಿನಾಕಾರಣ ಸಚಿವರ ಹೆಸರಿಗೆ ಧಕ್ಕೆ ತರುವ ಕೆಲಸ ಬಿಟ್ಟುಬಿಡಿ ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಸಂಚಾಲಕ ಶಿವಮೂರ್ತಿ ಪಾಮನೋರ ಮಾತನಾಡಿ, ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರೊಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ, ಅಭಿವೃದ್ಧಿ ಪರ ಚಿಂತನೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ರಾಜ್ಯ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ ಇವರ ಬೆಳವಣಿಗೆ ಸಹಿಸದೆ ಬಿಜೆಪಿ ಮುಖಂಡರು ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡುತ್ತಿರುವುದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ದಲಿತ ಮುಖಂಡ ಜೈ ಭೀಮ್ ಶರ್ಮಾ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ಹಗರಣಗಳು ಬಯಲಿಗೆ ತಂದ ಕಾರಣಕ್ಕೆ ಇವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ಸಚಿವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿರುವುದು ಸಹಿಸುವುದಿಲ್ಲ ಎಂದರು. ಬಿಜೆಪಿಯವರು ಪಿಎಸ್ಐ ಕಿಂಗ್ ಪಿನ್ ದಿವ್ಯ ಹಾಗರಗಿ ಜೊತೆಗೆ ಹೋರಾಟ ಮಾಡಲು ನಾಚಿಕೆಯಾಗಬೇಕು ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ನೌಕರರ ವಿಭಾಗದ ಸಂಘಟನಾ ಸಂಚಾಲಕ ಧರ್ಮಣ್ಣ ಕಟ್ಟಿಮನಿ, ಕಾರ್ಮಿಕ ವಿಭಾಗದ ಸಂಘಟನಾ ಸಂಚಾಲಕ ರವಿಚಂದ್ರ ದೇವಿ ಹೊಸ್ಸುರ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘಟನಾ ಸಂಚಾಲಕ ಭೀಮರಾಯ ಕೊಂಚೂರಕರ್, ಖಜಾಂಚಿ ನವಾಬ್ ಮುನಸಿ, ಆಂತರಿಕ ಶಿಸ್ತು ಸಂಘಟನಾ ಸಂಚಾಲಕ ನಾಗೇಂದ್ರ ಬುರ್ಲಿ, ವಲಯ ಸಂಚಾಲಕ ಸಾಬಣ್ಣ ಜಡಿ, ಶಾಮರಾವ್ ಬೊಮ್ಮನೋರ, ಅರುಣ ಹೊನಗುಂಟಿಕರ್ ಸೇರಿದಂತೆ ಇತರರು ಇದ್ದರು.