ವಾಡಿ ಪಟ್ಟಣಕ್ಕೆ ಬಸ್ ನಿಲ್ದಾಣ, ಶೌಚಾಲಯ, ಕಾಲೇಜು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿಯಿಂದ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರಕಾರಿ ಕಾಲೇಜು, ಸುಲಭ ಶೌಚಾಲಯ, ಸಾರ್ವಜನಿಕ ಮೂತ್ರಾಲಯಗಳಿಗಾಗಿ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಪಟ್ಟಣದ ಚೌಡೇಶ್ವರ ಚೌಕ್ ದಿಂದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಗೌರವಾಧ್ಯಕ್ಷ ಜಯದೇವ ಜೋಗಿಕಲ್ ಮಠ ಹಾಗೂ ಉಪಾಧ್ಯಕ್ಷ ಸಿದ್ದಯ್ಯ ಶಾಸ್ತಿ ನಂದೂರಮಠ ಅವರು ಮಾತನಾಡಿ, ರಾಷ್ಟೀಯ ಹೆದ್ದಾರಿ ಹೊಂದಿರುವ ಮತ್ತು ಪುರಸಭೆ ಆಡಳಿತ ಕೇಂದ್ರವಾಗಿರುವ ವಾಡಿ ಪಟ್ಟಣಕ್ಕೆ ಪ್ರತಿದಿನ ಸಾರಿಗೆ ಸಂಸ್ಥೆಯ ಬಸ್‌ಗಳು ಬಂದು ಹೋಗುತ್ತವೆ. ಬಸ್ ಕಿಕ್ಕಿರಿಯುವಷ್ಟು ಪ್ರಯಾಣಿಕರಿರುತ್ತಾರೆ. ಬಿಸಿಲು, ಮಳೆ, ಗಾಳಿ, ಚಳಿ ಎನ್ನದೆ ರಸ್ತೆಯ ಮೇಲೆ ಗಂಟಗಟ್ಟಲೆ ನಿಂತು ಬಸ್‌ಗಳಿಗಾಗಿ ಕಾಯಬೇಕಾದ ಪರಸ್ಥಿತಿಯಿದೆ. ಬಸ್ ನಿಲ್ದಾಣ ಇದ್ದಿದ್ದರೆ ಹೊರಗಿನಿಂದ ಬರುವ ಸಾರ್ವಜನಿಕರಿಗೆ ಶೌಚಾಲಯ ಸೌಲಭ್ಯ ಒದಗುತ್ತದೆ. ಸ್ವಾತಂತ್ರ್ಯ ಸಿಕ್ಕು 78 ವರ್ಷವಾದರೂ ಪಟ್ಟಣ ಪ್ರದೇಶದಲ್ಲಿ ಮೂತ್ರಾಲಯ, ಶೌಚಾಲಯ, ಬಸ್ ನಿಲ್ದಾಣದಂತ ಮೂಲಭೂತ ಸೌಕರ್ಯಗಳನ್ನು ಕೊಡದ ಅನಾಗರಿಕ ಪಂಚಾಯಿತಿ ಆಡಳಿತದಲ್ಲಿ ನಾವು ಬದುಕುತ್ತಿದ್ದೇವೆ. ಗೋಡೆಗಳ ಆಸ್ರೆಗೆ ನಿಂತು ಮೂತ್ರ ವಿಸರ್ಜನೆ ಮಾಡುವ ಪ್ರಾಣಿಗಳಿಗೂ ಮನುಷ್ಯರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಜನರ ಸಂಕಷ್ಟಗಳನ್ನು ಅರಿಯದ ಬೇಜವಾಬ್ದಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಮೂಲಕ ಯಾವುದೇ ಸಬೂಬು ಹೇಳದೆ ತಕ್ಷಣವೇ ವಾಡಿ ಪಟ್ಟಣದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಬೇಕು, ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯಗಳ ವ್ಯವಸ್ಥೆ ಮಾಡಬೇಕು, ಪಟ್ಟಣದ ಕನಿಷ್ಠ ಎರಡು ಸ್ಥಳಗಳಲ್ಲಿ ಸುಲಭ ಶೌಚಾಲಯಗಳನ್ನು ನಿರ್ಮಿಸಬೇಕು, ನಿರ್ಲಕ್ಷ್ಯ ವಹಿಸಿದರೆ ವಾಡಿ ಬಂದ್ ಆಚರಿಸುವ ಮೂಲಕ ಚಂಬು ಹಿಡಿದು ಪುರಸಭೆ ಮುತ್ತಿಗೆ ಹಾಕುವ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನಧ್ವನಿ ಜಾಗೃತ ಸಮಿತಿಯ ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ್, ಮುಖಂಡರಾದ ಜಯದೇವ ಜೋಗಿಕಲ್ ಮಠ, ಶಿವಪ್ಪ ಮುಂಡರಗಿ, ಯುಸ್ಯೂಪ್ ಮುಲ್ಲಾ ಕಮರವಾಡಿ, ಭೀಮಸಿಂಗ್ ಚವ್ಹಾಣ, ಮಹಾಂತೇಶ ಬಿರಾದಾರ, ಕಾಶೀನಾಥ ಶೆಟಗಾರ, ಈರಣ್ಣ ಯಲಗಟ್ಟಿ, ದೇವಿಂದ್ರ ದೊಡ್ಡಮನಿ, ಶರಣುಕುಮಾರ ದೋಶೆಟ್ಟಿ, ಲಕ್ಷ್ಮೀ ಸುರೇಶ ಕುಲಕರ್ಣಿ, ವಿಠ್ಠಲ ರಾಠೋಡ, ಚಂದ್ರು ಕರಣಿಕ, ರವಿ ಸಿಂಧಗಿ, ಮಲ್ಲಿಕಾರ್ಜುನ ಹಣಿಕೇರಾ, ಮಹೆಮೂಬ ನದಾಫ್, ಶ್ರೀಶೈಲ್ ಪುರಾಣಿಕ, ಚಂದ್ರು ಮಾಳಗಿ, ರಮೇಶ ಕಾಂಬಳೆ, ಅನೀಲ ನೀರಡಗಿ, ಮಹ್ಮದ್ ರಫೀಕ್, ರಾಜು ಒಡೆಯರಾಜ, ಸುರೇಶ ನಾಟೇಕರ, ಈರಣ್ಣ ಇಸಬಾ, ಮಹಾದೇವಯ್ಯಸ್ವಾಮಿ ಹಿರೇಮಠ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬರೆದ ಮನವಿಪತ್ರವನ್ನು ಉಪ ತಹಶೀಲ್ದಾರ್ ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್ ಸ್ವೀಕರಿಸಿದರು.