ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಲು ಶೀಘ್ರದಲ್ಲೇ ಚಿತ್ತಾಪುರ ಕೋಲಿ ಸಮಾಜದ ನಿಯೋಗ: ಯಾಗಾಪೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನಾಗಾವಿ ದೇವಸ್ಥಾನದ ಹತ್ತಿರದ ಕೋಲಿ ಸಮಾಜದ ಸಮುದಾಯ ಭವನದ ಕುರಿತು, ಲಾಡ್ಜಿಂಗ್ ಕ್ರಾಸ್ ಹೆಸರು ಬದಲಾಯಿಸಿ ಅಂಬಿಗರ ಚೌಡಯ್ಯ ವೃತ್ತ ಎಂದು ನಾಮಕರಣ ಮಾಡುವುದು ಹಾಗೂ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶೀಘ್ರದಲ್ಲೇ ಕೋಲಿ ಸಮಾಜದ ಮುಖಂಡರ ನಿಯೋಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ನೀಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಹೇಳಿದರು.
ನಾಗಾವಿ ದೇವಸ್ಥಾನ ಹತ್ತಿರದ ಕೋಲಿ ಸಮಾಜದ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕೋಲಿ ಸಮಾಜದ ಅಧ್ಯಕ್ಷನಾದ ನಂತರ ಲಾಡ್ಜಿಂಗ್ ಕ್ರಾಸ್ ಹತ್ತಿರದ ಅಂಬಿಗರ ಚೌಡಯ್ಯ ವೃತ್ತದಲ್ಲಿನ ವಿದ್ಯುತ್ ಟಿಸಿ ಸ್ಥಳಾಂತರ ಮಾಡಲು ಜೆಸ್ಕಾಂ ಎಇಇಗೆ ಮನವಿ ಮಾಡಿದಾಗ ಅವರು ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ ಇದು ನಮ್ಮ ಮೊದಲ ಕೆಲಸವಾಗಿದೆ, ಅಲ್ಲದೇ ವೃತ್ತಕ್ಕೆ ಸುಣ್ಣ ಬಣ್ಣ ಸೇರಿದಂತೆ ಅಭಿವೃದ್ಧಿ ಕೆಲಸಗಳು ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಾನು ಅಧ್ಯಕ್ಷನಾದ ನಂತರ ತಾಲೂಕಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ ಹಿರಿಯರು, ಕಿರಿಯರು, ಮತ್ತು ಯುವಕರು ಎಲ್ಲರೂ ಆಶೀರ್ವಾದಿಸಿದ್ದಾರೆ ಇದರಿಂದ ನನ್ನಲ್ಲಿ ಮತ್ತಷ್ಟು ಹುರುಪು ಹುಮ್ಮಸ್ಸು ಬಂದಿದೆ. ಬರುವ ದಿನಗಳಲ್ಲಿ ಗ್ರಾಮಗಳಿಗೆ ಪ್ರವಾಸ ಮಾಡಿ ಸಮಾಜದ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದರು.
ಯುವ ಮುಖಂಡ ಗುಂಡು ಐನಾಪುರ ಮಾತನಾಡಿ, ಚಿತ್ತಾಪುರ ಕೋಲಿ ಸಮಾಜದ ನೂತನ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಆಯ್ಕೆಯಾದ ನಂತರ ತಾಲೂಕಿನ ಮುಖಂಡರಲ್ಲಿ ಮತ್ತು ಯುವಕರಲ್ಲಿ ಹುಮ್ಮಸ್ಸು ಮೂಡಿದೆ. ಶಿವುಕುಮಾರ ಯಾಗಾಪೂರ ಕೋಲಿ ಸಮಾಜದ ಅಧಿಕೃತ ತಾಲೂಕು ಅಧ್ಯಕ್ಷರಾಗಿದ್ದಾರೆ ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಜಿಲ್ಲೆಯಲ್ಲಿಯೇ ತಾಲೂಕು ಮಟ್ಟದಲ್ಲಿ ಸುಸಜ್ಜಿತ ಹಾಗೂ ಭವ್ಯ ಸಮುದಾಯ ಭವನ ನಿರ್ಮಾಣ ಆಗುತ್ತಿರುವುದು ಅದು ಚಿತ್ತಾಪುರದಲ್ಲಿ ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿ ಮತ್ತು ಸಹಕಾರವೇ ಮುಖ್ಯವಾಗಿದೆ ಎಂದರು. ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಲು ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಮುಖಂಡ ತಮ್ಮಣ್ಣ ಡಿಗ್ಗಿ ಮಾತನಾಡಿ, ನಾನು ಮೊಗಲಾ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗುವಾಗ ಮೊಗಲಾ, ಇಟಗಾ ಗ್ರಾಮದ ಸದಸ್ಯರು ಮತ್ತು ಜನರು ಸಹಕಾರ ಮಾಡಿ ಆಶೀರ್ವಾದ ಮಾಡಿದ್ದಾರೆ ಇದರಲ್ಲಿ ಭೀಮಣ್ಣ ಸಾಲಿ ಅವರ ಪಾತ್ರ ಏನೂ ಇಲ್ಲ ಹೀಗಾಗಿ ವಿನಾಕಾರಣ ಗೊಂದಲದ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದಾರೆ. ಕೋಲಿ ಸಮಾಜದ ಎಲ್ಲರೂ ನೂತನ ಅಧ್ಯಕ್ಷ ಶಿವುಕುಮಾರ ಯಾಗಾಪೂರ ಅವರಿಗೆ ಬೆಂಬಲಿಸುವ ಮೂಲಕ ಇನ್ನಷ್ಟು ಶಕ್ತಿ ತುಂಬಬೇಕು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ಮುಖಂಡರಾದ ಭೀಮಣ್ಣ ಸೀಬಾ, ಸಂತೋಷ ಇವಣಿ, ಸಾಬಣ್ಣ ಭರಾಟೆ, ಶರಣು ಅರಣಕಲ್ ಸೇರಿದಂತೆ ಇತರರು ಇದ್ದರು.