ಚಿತ್ತಾಪುರದಲ್ಲಿ ವಿಜೃಂಭಣೆಯಿಂದ ಜರುಗಿದ ಬನಶಂಕರಿ ದೇವಿ ಪಲ್ಲಕ್ಕಿ ಉತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬನದ ಹುಣ್ಣಿಮೆಯ ದಿನ ಪಟ್ಟಣದಲ್ಲಿ ಬನಶಂಕರಿ ದೇವಿಯ ಪಲ್ಲಕ್ಕಿ ಮೆರವಣಿಗೆಯು ಬಹು ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ರಾಮಲಿಂಗ ಚೌಡೇಶ್ವರಿ ಮಂದಿರದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ವಿಶೇಷ ಅಲಂಕಾರದೊಂದಿಗೆ, ಸಕಲ ವಿಧಿವಿಧಾನಗಳೊಂದಿಗೆ ಅಪರಾಹ್ನ ಮುತ್ತೈದಿಯರ ಉಡಿತುಂಬುವ ಕಾರ್ಯಕ್ರಮ ನಂತರ ಮಹಾಪ್ರಸಾದ ನಡೆಯಿತು. ಬೆಳಿಗ್ಗೆಯಿಂದ ವಿವಿಧ ಬಡಾವಣೆಗಳಿಂದ ಮಂದಿರಕ್ಕೆ ಆಗಮಿಸಿದ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರುಶನ ಪಡೆದು ಕಾಯಿ ಕರ್ಪೂರ ಹಾಗೂ ನೈವೇದ್ಯಗಳ ಸಮರ್ಪಿಸಿದರು.
ಸಂಜೆ 6 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ದೇವಿಯ ಉತ್ಸವ ಮೂರ್ತಿ ಇರಿಸಿ ಹಾಗೂ ತೆರೆದ ವಾಹನದಲ್ಲಿ ಬನಶಂಕರಿ ದೇವಿಯ ಭಾವಚಿತ್ರ ವಿದ್ಯುತ್ ಹಾಗೂ ಪುಷ್ಪಾಲಂಕಾರದೊಂದಿಗೆ,ವಿಶೇಷ ಪೂಜೆ ಸಲ್ಲಿಕೆಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಪುರುವಂತರಿಂದ ಮೈನವಿರೇಳಿಸುವ ಶಸ್ತ್ರಧಾರಣೆ, ಅವರ ಭಕ್ತಿಗಾಯನ, ಸುಮಂಗಲೆಯರ ಕುಂಭ ಕಳಸ ಹೊತ್ತ ಹಾಗೂ ಆರತಿ ಹಿಡಿದು ಸಾಗುವುದು, ಸಕಲ ವಾದ್ಯ ಮೇಳಗಳು, ಮಹಿಳೆಯರ ಭಜನಾ ಗೀತೆಗಳು, ಯುವಕರ ದೇವಿಯ ಉದ್ಘೋಷಣೆಗಳು, ಭಕ್ತಿಯ ಭಾವ ಇಮ್ಮಡಿಸಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ದೇವಿಗೆ ವಂದಿಸಿ ಕಣ್ತುಂಬಿಕೊಂಡರು. ಸಂಜೆ 9.30 ಕ್ಕೆ ಪಲ್ಕಕ್ಕಿ ಮೆರವಣಿಗೆ ಮಂದಿರ ತಲುಪಿ ಮಹಾಮಂಗಳಾರತಿ ಜರುಗಿತು.
ಈ ಸಂದರ್ಭದಲ್ಲಿ ಹಟಗಾರ ಸಮಾಜದ ಅಧ್ಯಕ್ಷ ಬಸವರಾಜ ರಾಜೋಳ್ಳಿ, ರಾಜಶೇಖರ ಬಳ್ಳಾ, ವಸುದೇವ ಗಂಜಿ, ಅಯ್ಯಣ್ಣ ಅಲ್ಲಮ್, ಶಿವಕುಮಾರ ಶೀಲವಂತ, ರಾಚಣ್ಣ ಕಾಳಗಿ, ಮಹಾದೇವ ಕಾಳಗಿ, ಶಿವರಾಜ ವೈಕುಂಠ, ಸುರೇಶ ಮತಕುಂಟಿ, ಅಯ್ಯಪ್ಪ ಪರ್ಲಿ, ವಿಶ್ವನಾಥ ಅಲ್ಲಮ್, ಗುರಣ್ಣ ದಂಡೋತಿ, ರಾಚಣ್ಣ ವೈಕುಂಠ, ರಾಜಶೇಖರ ಶಿರ್ಪಾ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು.