ಸನ್ನತಿಯಲ್ಲಿ ಫೆ.12 ರಂದು 200 ಬೌದ್ಧ ಬಿಕ್ಕುಗಳ ಸಮ್ಮಿಲನ, ಧಮ್ಮ ತ್ರಿಪೀಟಕ ಪಠಣ: ಸಾಯಬಣ್ಣ ಹೊಸಮನಿ
ನಾಗಾವಿ ಎಕ್ಸಪ್ರೆಸ್
ವಾಡಿ: ಮೌರ್ಯ ಸಾಮ್ರಾಜ್ಯದ ಧೊರೆ ಸಾಮ್ರಾಟ ಅಶೋಕನ ಕಾಲಘಟ್ಟದ ಶಿಲಾ ಶಾಸನಗಳು ಮತ್ತು ಬುದ್ಧ ಪ್ರತಿಮೆಗಳು ದೊರೆತಿರುವ ಐತಿಹಾಸಿಕ ಬೌದ್ಧ ತಾಣ ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ಫೆ.12 ರಂದು ಬೃಹತ್ ಸಮಾರಂಭ ಏರ್ಪಡಿಸಲಾಗಿದ್ದು, ದೇಶ ವಿದೇಶಗಳಿಂದ 200 ಬೌದ್ಧ ಬಿಕ್ಕುಗಳು ಪಾಲ್ಗೊಳ್ಳಲಿದ್ದಾರೆ ಎಂದು ಸನ್ನತಿ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆಯ ಅಧ್ಯಕ್ಷ ಸಾಯಬಣ್ಣ ಹೊಸಮನಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೃಹತ್ ಬೌದ್ಧ ಸ್ತೂಪ ಮತ್ತು ಅಶೋಕನ ಆಡಳಿತದ ರಣಮಂಡಲ (ಯುದ್ಧ ಭೂಮಿ) ಪತ್ತೆಯಾಗಿರುವ ಸನ್ನತಿಯ ಕನಗನಹಳ್ಳಿ ಬೌದ್ಧ ತಾಣದಲ್ಲಿ ಮಾಘ ಪೂರ್ಣಿಮೆಯಂದು ಭಂತೇಜಿಗಳ ಸದ್ಧಮ್ಮ ಕಾರ್ಯ ಆಯೋಜನೆಗೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಕರ್ನಾಟಕದ ಮಹಾಬೋಧಿ ಸಂಸ್ಥೆ ಹಾಗೂ ಬೀದರ ಭಂತೇಜಿಗಳು ಸೇರಿದಂತೆ ಮಹಾರಾಷ್ಟ್ರ, ಆಂದ್ರಪ್ರದೇಶ ಹಾಗೂ ಥೈಲ್ಯಾಂಡ್, ಭರ್ಮಾ, ಮಲೇಶಿಯಾ, ಸಿಂಗಾಪುರ, ಯುಎಸ್ಎ, ಜಪಾನ್ ದೇಶಗಳಿಂದಲೂ ಬೌದ್ಧ ಭಿಕ್ಷುಗಳು ಆಗಮಿಸಲಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಆನಂದ ಭಂತೇಜಿ ಹಾಗೂ ಬುದ್ಧರತ್ನ ಭಂತೇಜಿ ನೇತೃತ್ವದಲ್ಲಿ ಸಾಮೂಹಿಕ ತ್ರಿಪೀಟಕ ಪಠಣ ನಡೆಯಲಿದೆ. ಇಡೀ ದಿನ ಭಂತೇಜಿಗಳಿಂದ ಧಮ್ಮ ಪ್ರವಚನ ಮಂಡಿಸಲಾಗುತ್ತಿದೆ. ಸುಮಾರು ಐದು ಸಾವಿರ ಜನ ಬೌದ್ಧ ಅನುಯಾಯಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು, ಇದಕ್ಕಾಗಿ ಸನ್ನತಿಯ ಭೀಮಾನದಿ ದಂಡೆಯಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಗೌರವಾಧ್ಯಕ್ಷ ಭಾಗಪ್ಪ ಯಾದಗಿರಿ ಮಾತನಾಡಿ, 1990 ರಲ್ಲಿ ಸನ್ನತಿಯ ನೆಲದಲ್ಲಿ ಭಾರತ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ಕೈಗೊಂಡ ಉತ್ಖನನದಲ್ಲಿ ಪ್ರಾಚೀನ ಬೌದ್ಧ ಸ್ತೂಪ ಸಮುಚ್ಚಯ ಹಾಗೂ 210 ಎಕರೆ ಪ್ರದೇಶದಲ್ಲಿ ರಣಮಂಡಲ ಬೆಳಕಿಗೆ ಬಂದಿವೆ. ದೇಶ ವಿದೇಶಗಳಿಗೂ ಸನ್ನತಿ ಬೌದ್ಧ ತಾಣದ ಪ್ರಸಿದ್ಧಿ ಹರಡಿದೆ. ಆದರೆ 35 ವರ್ಷಗಳು ಉರುಳಿದರೂ ಸನ್ನತಿ ಪ್ರವಾಸಿತಾಣವಾಗಿ ಅಭಿವೃದ್ಧಿ ಕಂಡಿಲ್ಲ ಎಂಬ ಬೇಸರ ಎಲ್ಲರಲ್ಲೂ ಮೂಡಿದೆ. ಸನ್ನತಿ ಬೌದ್ಧ ತಾಣದ ಅಭಿವೃದ್ಧಿಗಾಗಿಯೇ ರಚನೆಯಾದ ಸನ್ನತಿ ಬುದ್ಧ ಧಮ್ಮ ಸಂಘ ನಿಷ್ಕ್ರೀಯವಾಗಿದ್ದು, ಅಭಿವೃದ್ಧಿ ಹೋರಾಟಕ್ಕೆ ಹಿನ್ನಡೆಯಾಗಿದೆ. ಸರ್ಕಾರದಿಂದ ರಚನೆಯಾದ ಸನ್ನತಿ ಅಭಿವೃದ್ಧಿ ಪ್ರಾದೀಕಾರವೂ ಕೂಡ ಬೌದ್ಧ ತಾಣವನ್ನು ಕಡೆಗಣಿಸಿದೆ ಎಂದು ತೀರ್ಪು ಅಸಮಾಧಾನ ವ್ಯಕ್ತಪಡಿಸಿದರು.
ಸನ್ನತಿಯ ಸಮಘ್ರ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ ಹುಟ್ಟಿಕೊಂಡಿದೆ. ಧಮ್ಮಕ್ಕೆ ಸೇರಿದ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಲೇ ಸರ್ಕಾರದ ಕಣ್ಣು ತೆರೆಸಲು ಹೋರಾಟಗಳನ್ನೂ ಸಂಘಟಿಸಲು ತೀರ್ಮಾನಿಸಿದ್ದೇವೆ. ಆರಂಭದ ಹಂತವಾಗಿ ಫೆ.12 ರಂದು ಆಯೋಜಿಸಲಾಗಿರುವ ತ್ರಿಪೀಟಕ ಪಠಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ದಲಿತರು, ಬೌದ್ಧರು, ಸಾರ್ವಜನಿಕರು ಧಮ್ಮ ಕಾರ್ಯಕ್ಕೆ ಜತೆಯಾಗಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಭಾಗಪ್ಪ ಯಾದಗಿರಿ, ಮೋನಪ್ಪ ಮಾರಡಗಿ, ಶ್ರೀಮಂತ ಭಾವೆ, ಶಿವಯೋಗಿ ದೇವಿಂದ್ರಕರ, ಸಂದೀಪ ಕಟ್ಟಿ, ಭಗವಾನ ಎಂಟಮನ್ ಚಾಮನೂರ, ಭೀಮಾಶಂಕರ ಬಿ.ತೇಲಕರ, ರಾಜು ಕೋಗಿಲ್ ಕೊಲ್ಲೂರ ಇದ್ದರು.