ಪೀಣ್ಯ ಕೂಲಿ ಕಾರ್ಮಿಕರ ಮನೆಗಳನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿದ ಶಾಸಕ ಮುನಿರತ್ನಂ ಅವರ ಜನವಿರೋಧಿ ನಡೆಗೆ ಖಂಡನೆ, ಕೂಡಲೇ ಕ್ರಮಕ್ಕೆ ಸಾಮಾಜಿಕ ಹೋರಾಟಗಾರರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ನಗರದ ಪೀಣ್ಯ ಮೊದಲನೆಯ ಹಂತದಲ್ಲಿರುವ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಿವಿಧ ಹಳ್ಳಿಗಳಿಂದ ಕೂಲಿಯನ್ನು ಆರಿಸಿಕೊಂಡು ಬೆಂಗಳೂರಿನ ಪೀಣ್ಯದಲ್ಲಿ ಬಹು ವರ್ಷಗಳಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಉಪಜೀವನವನ್ನು ನಡೆಸುತ್ತಿರುವ ಬಡ ಕೂಲಿ ಕಾರ್ಮಿಕರ ಗುಡಿಸಲು ಮತ್ತು ಸೀಟ್ ಮನೆಗಳನ್ನು ಆರ್.ಆರ್ ನಗರ ಮತಕ್ಷೇತ್ರದ ಶಾಸಕ ಮುನಿರತ್ನಂ ಹಾಗೂ ಅವರ ಬೆಂಬಲಿಗರು ಏಕಾಏಕಿ ಬಂದು ಯಾವುದೇ ಮುನ್ಸೂಚಿನೆಯನ್ನು ಸಹ ಕೊಡದೆ ಕಾನೂನುಬಾಹಿರ ವಾಗಿ ಕಾರ್ಮಿಕರ ಕಾಲೋನಿಗೆ ಜೆ.ಸಿ.ಬಿಗಳನ್ನು ಅನಧಿಕೃತವಾಗಿ ನುಗ್ಗಿಸಿ ಬಡ ಕೂಲಿ ಕಾರ್ಮಿಕರ ಮನೆಗಳನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿರುವುದು ಖಂಡನೀಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಯ್ಯಪ್ಪ ರಾಮತೀರ್ಥ ತಿಳಿಸಿದ್ದಾರೆ.
ಇಂತಹ ಅಮಾನವೀಯ ಕೃತ್ಯವನ್ನು ಜನರಿಂದ ಆಯ್ಕೆಯಾದ ಶಾಸಕರೊಬ್ಬರು ಮಾಡಿರುವುದು ನಾಚಿಕೆಗೇಡಿನ ವಿಷಯ. ಇವರ ಹಾಗೂ ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ವಿವಿಧ ಕನ್ನಡಪರ ಸಂಘಟನೆಗಳು, ಹಾಗೂ ದಲಿತ ಮುಖಂಡರ ಹಾಗೂ ಸಾಮಾಜಿಕ ಹೋರಾಟಗಾರರ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಯಿತು.
ಇಲ್ಲಿನ ವಸ್ತುಸ್ಥಿತಿ ಸಂಪೂರ್ಣ ಮಾಹಿತಿಯನ್ನು ಯಶವಂತಪುರ ಎ.ಸಿ.ಪಿ. ಸದಾನಂದ ರವರ ಗಮನಕ್ಕೆ ತರಲಾಯಿತು. ಹಾಗೂ ನೊಂದ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸಾಂತ್ವಾನ ಹೇಳಿ ಸರಕಾರದಿಂದ ಪುನರ್ವಸತಿ ಕಲ್ಪಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಪ್ರತಿಭಟನೆಯಲ್ಲಿ, ಆದಿ ಜಾಂಬವ ಸಂಘದ ರಾಜ್ಯಾಧ್ಯಕ್ಷ ಜಂಬೂದೀಪ ಸಿದ್ದರಾಜು, ಪ್ರಧಾನ ಕಾರ್ಯದರ್ಶಿಗಳಾದ ಸಿ. ವಿ.ರಮೇಶ್ ಕುಮಾರ್, ಕಾರ್ತಿಕ್, ಬಸವರಾಜ್, ಶ್ರೀಲಯನ್ ಬಾಲಕೃಷ್ಣ , ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್, ಜೈ ಭೀಮ್ ಮಧುರೈ, ಮಲ್ಲಿಕಾರ್ಜುನ್ ಬಾಂಬೆ, ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ, ಮಹಿಳಾ ಮುಖಂಡೆ ರತ್ನಮ್ಮ ಹಾಗೂ ಈ ಘಟನೆಯಲ್ಲಿ ನೊಂದ ಮಹಿಳೆಯರಾದ ಭೀಮ್ ಬಾಯಿ, ಹನುಮಂತಿ, ಅಯ್ಯಮ್ಮ, ಮಾನಮ್ಮ, ಮಲ್ಕಮ್ಮ ಗೀತಕ್ಕ, ಹಾಗೂ ಅನೇಕ ಯುವಕರು ಭಾಗವಹಿಸಿದ್ದರು.