ಕುಮಾರಶ್ರೀ ರಾಜ್ಯ ಮಟ್ಟದ ಪ್ರಶಸ್ತಿಗೆ ಬಾಬು ಗೋಪಾನ್ ಆಯ್ಕೆ, ಬೆಣ್ಣೂರು.ಬಿ ಗ್ರಾಮಸ್ಥರು ಹರ್ಷ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ಲ ಇದರ 42 ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡಮಾಡುತ್ತಿರುವ ರಾಜ್ಯ ಮಟ್ಟದ ಕುಮಾರಶ್ರೀ ಪ್ರಶಸ್ತಿ ಗೆ ಚಿತ್ತಾಪುರ ಕ್ಷೇತ್ರದ ಬೆಣ್ಣೂರ.ಬಿ ಗ್ರಾಮದ ರಂಗಭೂಮಿ ಕಲಾವಿದ ಬಾಬು ಶಿವಪ್ಪ ಗೋಪಾನ್ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಮಾಲಿಕ ಎಲ್.ಬಿ.ಶೇಖ್ ಮಾಸ್ತರ ಮತ್ತು ಸಂಚಾಲಕ ಶ್ರೀಧರ್ ಹೆಗಡೆ ಅವರು ತಿಳಿಸಿದ್ದಾರೆ.
ಇದೇ ಸೆ.27 ರಂದು ಕಲಬುರಗಿ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬೆಳಗ್ಗೆ 10.30 ಕ್ಕೆ ಹಾರಕೂಡ್ ಶ್ರೀ ಡಾ.ಚೆನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಕುಮಾರಶ್ರೀ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದ ಸಂಘದ ಮಾಲಕರಿಗೆ ಹಾಗೂ ಆಯ್ಕೆಯಾದ ಬಾಬು ಗೋಪಾನ್ ಅವರಿಗೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ಪ್ರಭು ಕುಂಬಾರ, ಮುಖಂಡರಾದ ಶಾಂತಕುಮಾರ್ ಪಾಟೀಲ, ರಾಜಕುಮಾರ್ ಜಮಾದಾರ ಅವರು ಅಭಿನಂದನೆಗಳು ತಿಳಿಸಿದ್ದಾರೆ.
ಬಾಬು ಗೋಪಾನ್ ನಾಟಕದಲ್ಲಿ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುವ ಶಕ್ತಿ ಮತ್ತು ಸಾಮರ್ಥ್ಯ ಹೊಂದಿದ ಈ ಭಾಗದ ಅಪರೂಪದ ರಂಗಭೂಮಿ ಕಲಾವಿದ, ತಮ್ಮ ಅಭಿನಯದ ಮೂಲಕ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಗೋಪಾನ್ ಇಲ್ಲಿವರೆಗೆ 40 ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ, ಎಲ್ಲರೊಂದಿಗೂ ನಗುಮುಖದಿಂದ ಬೆರೆಯುವ ಸಾದಾ ಸೀದಾ ಕಲಾವಿದ ಗೋಪಾನ್ ಅವರಿಗೆ ರಾಜ್ಯ ಮಟ್ಟದ ಕುಮಾರಶ್ರೀ ಪ್ರಶಸ್ತಿ ಲಭಿಸಿರುವುದು ಬೆಣ್ಣೂರ.ಬಿ ಗ್ರಾಮದ ಸಮಸ್ತ ಜನತೆಗೆ ಹರ್ಷವನ್ನುಂಟು ಮಾಡಿದೆ ಎಂದು ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ತಿಳಿಸಿದ್ದಾರೆ.