ಸಾಗರಮಾಲಾ ಯೋಜನೆಗೆ ರಾಜ್ಯದ ಹೆಚ್ಚಿನ ಅನುದಾನಕ್ಕೆ ಸಚಿವ ಮಂಕಾಳ್ ಎಸ್ ವೈದ್ಯ ಅವರಿಗೆ ಕೆ.ಎಂ.ಬಿ ಸಿಇಒ ಜಯರಾಮ್ ರಾಯಪುರ ಮನವಿ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕನಸಿನ ಕೂಸಾದ ಸಾಗರಮಾಲಾ ಯೋಜನೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಜಯರಾಮ್ ರಾಯಪುರ ಅವರು ತಿಳಿಸಿದ್ದಾರೆ.
ನಗರದ ವಿಕಾಸ ಸೌಧ ಎರಡನೇ ಮಹಡಿಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಅಧ್ಯಕ್ಷತೆಯಲಿ ನಡೆದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಂಬಂಧಿಸಿದ 2025-26 ನೇ ಸಾಲಿನ ಅಯವ್ಯಯದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಸಾಗರಮಾಲಾ ಯೋಜನೆ ಅಡಿಯಲ್ಲಿರುವ ಒಟ್ಟು 26 ಯೋಜನೆಗಳಿಗೆ ಈಗಾಗಲೇ ಸುಮಾರು 1,016 ಕೋಟಿ ರೂಪಾಯಿ ಮೊತ್ತದ ಅನುಮೋದನೆಗೊಂಡಿದ್ದು, ಇದಕ್ಕೆ ವಿವಿದ ಹಂತದ ಕಾಮಗಾರಿಗಳು ಸಹ ಪ್ರಗತಿಯಲ್ಲಿವೆ. ಸಾಗರಮಾಲಾ ಯೋಜನೆಗೆ 2025 -26 ನೇ ಸಾಲಿನ ಕೇಂದ್ರದ ಅನುದಾನ 127.55 ಕೋಟಿ ಪಾಲು ಹೊಂದಿದರೆ, ರಾಜ್ಯದ ಪಾಲು 123.97 ಕೋಟಿ ಹೊಂದಿದೆ. ಆದರೆ ಇದಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಸಚಿವ ಮಂಕಾಳ ಎಸ್ ವೈದ್ಯ ಅವರಿಗೆ ಕೆ.ಎಂ.ಬಿ ಸಿಇಒ ಜಯರಾಮ್ ರಾಯಪುರ ಅವರು ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆ ಅಡಿ 65 ಕೋಟಿ ರೂ, ಅಂದಾಜು ಮೊತ್ತದಲ್ಲಿ ಹಳೇ ಮಂಗಳೂರು ಬಂದರಿನಲ್ಲಿ 350 ಮೀ. ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಈವರೆಗೆ 5496.32 ಲಕ್ಷಗಳ ಆರ್ಥಿಕ ಪ್ರಗತಿ ಸಾಧಿಸಿದೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಸಾಗರಮಾಲಾ 2.0 ಯೋಜನೆಯನ್ನು ನಿಯೋಜನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಯೋಜನೆಗೆ ರಾಜ್ಯದ ಸಚಿವರಿಗೆ ಭಾಗವಹಿಸುವಂತೆ ಕೆ.ಎಂ.ಬಿ ಸಿಇಒ ಅವರು ಮನವಿ ಮಾಡಿಕೊಂಡಿದ್ದು, ಇದಕ್ಕೆ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಪಾಲು ಅನುದಾನದಿಂದ ಸಾಗಾರಮಾಲಾ ಯೋಜನೆಯನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದು, ಹೆಚ್ಚಿನ ಅನುದಾನವನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಸಚಿವ ಮಂಕಾಳ್ ಎಸ್ ವೈದ್ಯ ಅವರು ಭರವಸೆ ನೀಡಿದ್ದಾರೆ.
2025-26 ಬಜೆಟ್ ನಲ್ಲಿ ಘೋಷಿಸುವಂತೆ ಮನವಿ: ಪ್ರತಿ ವರ್ಷವೂ ಮುಂಗಾರು ಮಳೆಯ ಸಮಯದಲ್ಲಿ ಕರಾವಳಿ ತೀರದಲ್ಲಿ ಕಡಲಕೊರೆತೆದ ಘಟನೆಗಳು ಸಂಭವಿಸುತ್ತದೆ. ಹೀಗಾಗಿ ಮುಂಬರುವ ಬಜೆಟ್ ನಲ್ಲಿ ಇದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವಂತೆ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಪರಿಸರ ಸ್ನೇಹಿ ಕಾಮಗಾರಿ: ರಾಜ್ಯ ಕರಾವಳಿಯ ಸಮುದ್ರತೀರಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಕಾರವಾರದ ರವೀಂದ್ರನಾಥ್ ಟಾಗೋರ್ ಸಮುದ್ರತೀರ ಹಾಗೂ ಮರವಂತೆಯ ಸಮುದ್ರತೀರ ಪ್ರದೇಶಗಳಲ್ಲಿ ಸಾಗರಮಾಲಾ ಅಭಿವೃದ್ಧಿ ನಿಗಮ ಹಾಗೂ ನವ ಮಂಗಳೂರು ಬಂದರು ಪ್ರಾಧಿಕಾರಗಳ ಸಹಾಯದಿಂದ ಬೇಕಿರುವ ಪರಿಸರ ಸ್ನೇಹಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು. ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವಂತೆ ಪ್ರಾಸ್ತವಾನೆ ಸಲ್ಲಿಸಿದರು.
ಈ ಸಭೆಯಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಲನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಬಂದರು ಮತ್ತು ಸದಸ್ಯರು, ಕರ್ನಾಟಕ ಜಲಸಾರಿಗೆ ಮಂಡಳಿಯ ಜಲಸಾರಿಗೆ ಮತ್ತು ಒಳನಾಡು ಜಲಸಾರಿಗೆ ನಿರ್ವಹಣೆಯ ನಿರ್ದೇಶಕ ಕ್ಯಾ.ಸಿ.ಸ್ವಾಮಿ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾದ ತಾರನಾಥ್ ರಾಥೋಡ್ ಹಾಗೂ ಕಚೇರಿಯ ಸಿಬ್ಬಂದಿಗಳು ಇದ್ದರು.