ಶಹಾಬಾದ ಹೆಚ್ಎಂಪಿ ಕಾಲೋನಿ ಮತ್ತು ಮಡ್ಡಿ ಜನರಿಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಖಂಡರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರದ ಹೆಚ್ಎಂಪಿ ಕಾಲೋನಿ ಮತ್ತು ಮಡ್ಡಿ ಜನರಿಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಮುಖಂಡರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮಹ್ಮದ ಇಮ್ರಾನ ಮಾತನಾಡಿ, ನಗರ ಸಭೆಯ ವಾರ್ಡ್ ನಂ. 27ರ ಇಂದಿರಾ ನಗರ ಮತ್ತು ಹೆಚ್ಎಂಪಿ ಕಾಲೋನಿಯ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ 150ಕ್ಕೆ ಹೊಂದಿಕೊಂಡು ಈ ಮುಂಚೆ ಸರ್ವಿಸ್ ರಸ್ತೆ ಯಲ್ಲಿ ಸಂಚಾರ ಮಾಡುತ್ತಿದ್ದರು, ಆದರೆ ಜೆಪಿ ಕಂಪನಿ ಹತ್ತಿರ ಮೇಲ್ಸೇತುವೆ ನಿರ್ಮಾಣ ವಾದಾಗಿನಿಂದ ಈ ಭಾಗದ ಜನರಿಗೆ ಸಂಚರಿಸಲು ತುಂಬಾ ತೊಂದರೆ ಆಗುತ್ತಿದ್ದು, ಆಟೋ ಚಾಲಕನ ಆಕ್ಸಿಡೆಂಟ್ ಸೇರಿದಂತೆ ಹಲವಾರು ದುರ್ಘಟನೆಗಳಾಗಿವೆ ಎಂದು ತಿಳಿಸಿದ್ದಾರೆ.
ಬಡಾವಣೆಯ ಜನರು ಹೆಚ್ಎಂಪಿ ಕಾಲೋನಿ ಮಾರ್ಗವಾಗಿ ಸಂಚಾರ ಮಾಡುತ್ತಿದ್ದು ಈ ರಸ್ತೆ ಮಾಲಗತ್ತಿ, ಶಂಕರವಾಡಿ, ವಾಡಿ, ಚಿತ್ತಾಪುರ, ಕಲಬುರಗಿ ಯಾದಗಿರಿ ಜಿಲ್ಲೆಗೆ ಸಂಚಾರವಾಗಿದೆ, ಈಗಾಗಲೇ ರಾಷ್ಟ್ರೀಯ ಹೆದ್ದಾರಿ 150 ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಈ ರಸ್ತೆ ಮಾರ್ಗ ಮಧ್ಯದಲ್ಲಿ ಹೆಚ್ಎಂಪಿ ಕಾರ್ಖಾನೆ ಇದ್ದು ಅದಕ್ಕೆ ಹೊಂದಿಕೊಂಡು ಮಡ್ಡಿ ಬಡಾವಣೆಯ ಸಾರ್ವಜನಿಕರು ಹಲವು ದಶಕಗಳಿಂದ ಸಂಚಾರ ಮಾಡುತ್ತಿದ್ದಾರೆ ಈಗ ಅಲ್ಲಿ ತಿರುವು ಇದ್ದು ತಿರುವಿನಲ್ಲಿ ಯಾವುದೇ ಗುರುತಿನ ಮಾರ್ಗ, ಸುರಕ್ಷತಾ ಸೂಚಕಗಳು ಇರುವುದಿಲ್ಲ, ಇದರಿಂದ ಈಗಾಗಲೇ ಎರಡು ದುರ್ಘಟನೆ ಆಗಿದ್ದು ಸಂಚಾರಕ್ಕಾಗಿ ಜನರು ಭಯಭಿತರಾಗಿದ್ದಾರೆ ಎಂದು ಹೇಳಿದರು.
ಕಾರಣ ರಾಷ್ಟ್ರೀಯ ಹೆದ್ದಾರಿ 150 ರಸ್ತೆಗೆ ಹೊಂದಿಕೊಂಡಿರುವ ಉಪ ರಸ್ತೆ ಜೆ.ಪಿ.ಕಾರ್ಖಾನೆ ಮಾರ್ಗವಾಗಿ ಕಾಲೋನಿಯ ಜನರಿಗೆ ಮಡ್ಡಿಯ ಜನರಿಗೆ ಇರುವ ಒಂದೇ ರಸ್ತೇಯಾಗಿದ್ದು ಇಲ್ಲಿ ತಿರುವು ಕೂಡ ಇದ್ದು ಸೂಕ್ತ ತಿರುವಿನ ಮಾರ್ಗದ ಬದಲಾಗಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ತಹಶೀಲ್ದಾರ್ ಜಗದೀಶ್ ಚೌರ ಮತ್ತು ನಗರ ಸಭೆಯ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ ಹಾಗೂ ಎನ್ಎಸಿ ಮುಖ್ಯ ಅಧಿಕಾರ ಶೀಲ್ಪಾ ರವರ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮಹ್ಮದ ಇಮ್ರಾನ, ನಗರ ಸಭೆ ಸದಸ್ಯ ಮಹ್ಮದ ಅಮ್ಜದ್, ಜಗದೇವ ಸುಬೇದಾರ, ವಾಜೀದ ಖಾನ ಜಮಾದಾರ ಮತ್ತು ನಾಗೇಂದ್ರ ನಾಟೀಕಾರ ಸೇರಿದಂತೆ ಇತರರು ಇದ್ದರು.
-ಶಹಾಬಾದ ಸುದ್ದಿ: ನಾಗರಾಜ್ ದಂಡಾವತಿ