ಇಂಗಳಗಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದಿನಾಚರಣೆ, ಗುಳೆ ತಪ್ಪಿಸುವುದೇ ಮನರೇಗಾದ ಮುಖ್ಯ ಉದ್ದೇಶ: ಪಂಡಿತ್ ಸಿಂದೆ
ನಾಗಾವಿ ಎಕ್ಸಪ್ರೆಸ್
ವಾಡಿ: ಹಳ್ಳಿಗಳಲ್ಲಿ ಕೆಲಸ ಇಲ್ಲದೆ ಕಾರ್ಮಿಕರು ಗ್ರಾಮ ಬಿಟ್ಟು, ಮಹಾನಗರಗಳಿಗೆ ಕುಟುಂಬ ಸಮೇತ ವಲಸೆ ಹೋಗುತ್ತಿದ್ದಾರೆ. ವಾಸಿಸುವ ಸ್ಥಳದಲ್ಲೇ ಕಾರ್ಮಿಕರಿಗೆ ಕೆಲಸ ನೀಡಿ, ಕಾರ್ಮಿಕರ ಗುಳೆ ತಪ್ಪಿಸುವುದೇ ಮನರೇಗಾ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮನರೇಗಾ ತಾಲೂಕು ಸಹಾಯಕ ನಿರ್ದೇಶಕ ಪಂಡಿತ್ ಸಿಂದೆ ಹೇಳಿದರು.
ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಮನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳದಲ್ಲೇ ಆಯೋಜಿಸಿದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮವನ್ನು ಕೆಕ್ ಕತ್ತರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮನರೇಗಾದಲ್ಲಿ ಕೆಲಸ ಮಾಡುವ ಮಹಿಳೆ, ಪುರುಷರಿಗೆ ಯಾವುದೇ ರೀತಿ ಲಿಂಗ ತಾರತಮ್ಯ ಮಾಡದೇ ಕಾರ್ಮಿಕರ ದುಡಿಮೆಗೆ ಸಮಾನ ವೇತನ ನೀಡಲಾಗುತ್ತದೆ. ಇದರಿಂದ ಆರ್ಥಿಕ, ಸಾಮಾಜಿಕವಾಗಿ ಮನರೇಗಾ ಯೋಜನೆ ಅತಿದೊಡ್ಡ ಯೋಜನೆಯಾಗಿದೆ. ಕೆಲಸ ಬಯಸಿ ಪಂಚಾಯಿತಿಗೆ ನಮೂನೆ-6 ನೀಡಿದಾಗ 15 ದಿನಗಳೊಳಗೆ ಕೆಲಸ ನೀಡಬೇಕು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ರೀತಿ ಮನರೇಗಾ ಕಾಯಿದೆಯಲ್ಲಿ ಅವಕಾಶ ನೀಡಲಾಗಿದೆ. ಎಂದು ಮನರೇಗಾ ಕುರಿತು ಮಾಹಿತಿ ನೀಡಿದರು.
ಕಾರ್ಮಿಕರು ಕೆಲಸಕ್ಕೆ ಹೋದಾಗ ಅವರ ಮಕ್ಕಳಿಗೆ ನೋಡಿಕೊಳ್ಳುವುದಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ (ಕೂಸಿನ ಮನೆ) ಶಿಶು ಪಾಲನಾ ಕೇಂದ್ರ ತೆರೆಯಲಾಗಿದೆ. ಕೇಂದ್ರದಲ್ಲಿ ಶಿಶುಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಶಿಶುಗಳಿಗೆ ಲಾಲನೆ ಪೋಷಣೆ ಮಾಡುವುದಕ್ಕೆ ಶಿಶು ಪಾಲಕಿಯರನ್ನು ತರಬೇತಿ ನೀಡಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಕರ್ತ ಡಾ.ಸಾಯಬಣ್ಣಾ ಗುಡುಬಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಮನರೇಗಾ ಯೋಜನೆಯಲ್ಲಿ 100 ದಿನ ಮಾನವ ದಿನಗಳನ್ನು ಪೂರೈಸಿದ ಕಾರ್ಮಿಕರಿಗೆ ತಾಲೂಕು ಪಂಚಾಯಿತಿ ವತಿಯಿಂದ ಸನ್ಮಾನ ಮಾಡಲಾಯಿತು.
ಮನರೇಗಾ ತಾಲೂಕು ತಾಂತ್ರಿಕ ಸಂಯೋಜಕ ವಿಶ್ವನಾಥ ಕಳಸ್ಕರ, ತಾಂತ್ರಿಕ ಸಹಾಯಕ ಮಹ್ಮದ ಶೆಹಜಾದ್ ಚೌದ್ರಿ, ತಾಂತ್ರಿಕ ಸಂಯೋಜಕ ಗಣೇಶ, ಮನರೇಗಾ ಸಂಯೋಜಕ ಗೋಪಾಲ ಚವಾಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಟಿಕಾರ್, ಪಿಡಿಓ ರುದ್ರುಸಾಹು ಅಳ್ಳೋಳಳಿ, ಕಾರ್ಯದರ್ಶಿ ಸಂಗಮೇಶ ಹೀರೆಮಠ, ಸದಸ್ಯರಾದ ಗೌಸ್ ದುದ್ದನಿ, ಕಾಶಿನಾಥ ಚನ್ನಗುಂಡ, ಅಕೌಂಟೆಂಟ್ ಸಿದ್ರಾಮ ಭಂಕೂರು, ಬಿಲ್.ಕಲೆಕ್ಟರ್ ರವಿ ಅಳ್ಳೋಳಳಿ, ಜಿಕೆಎಮ್ ಗಿಡ್ಡಮ್ಮ ಪವಾರ್ ಇದ್ದರು. ಶೇಖಮ್ಮ ಕುರಿ ಮತ್ತು ಮಮತಾ ನಾಟೀಕಾರ ಕ್ರಾಂತಿ ಗೀತೆ ಹಾಡಿದರು. ರಾಜಕುಮಾರ ಸಂಕಾ ನಿರೂಪಿಸಿ ವಂದಿಸಿದರು.