ಫೆ.12 ರಂದು ಸನ್ನತಿಯಲ್ಲಿ ಐತಿಹಾಸಿಕ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ, ಪೂರ್ವಭಾವಿ ಸಭೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸನ್ನತಿಯಲ್ಲಿ (ಕನಗನಹಳ್ಳಿ) ಮಹಾಬೋಧಿ ಸೋಸೈಟಿ, ಬೆಂಗಳೂರು ಹಾಗೂ ಲೈಟ್ ಆಫ್ ದಿ ಬುದ್ಧ ಧಮ್ಮ ಪ್ರತಿಷ್ಠಾನ, ಅಂತರಾಷ್ಟ್ರೀಯ ತ್ರಿಪಿಟಕ ಪರಿಷತ್ತು ಮತ್ತು ಬೌದ್ಧ ಮಹಾಸೂಪ್ತ ಅಭಿವೃದ್ಧಿ ಸಂರಕ್ಷಣಾ ಸಮಿತಿ ಸನ್ನತಿ ಇವರ ಸಂಯುಕ್ತಾಶ್ರಯದಲ್ಲಿ ಫೆ.12 ಬೆಳಿಗ್ಗೆ 10 ಗಂಟೆಗೆ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ, ತ್ರಿಪಿಟಕ ಸದ್ಧಮ್ಮ ಸಜ್ಜಾಯನ ಸಮಾರಂಭ ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ ದೇಶ ಮತ್ತು ವಿದೇಶದಿಂದ 108 ಬೌದ್ಧ ಭಿಕ್ಕುಗಳು ಆಗಮಿಸುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಮಾಹಿತಿ ನೀಡಿದರು.
ಪಟ್ಟಣದ ಬುದ್ಧ ವಿಹಾರದಲ್ಲಿ ನಡೆದ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ಇದರ ಬಗ್ಗೆ ಎಲ್ಲೆಡೆ ವ್ಯಾಪಕ ಪ್ರಚಾರ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.
ಮುಖಂಡ ಸಾಬಣ್ಣ ಬೆನ್ನಟ್ಟಿ ಮಾತನಾಡಿ, ಸಾವಿರಾರು ವರ್ಷಗಳ ನಂತರ ಮತ್ತೊಮ್ಮೆ ಪವಿತ್ರ ತ್ರಿಪಿಟಕ ಬುದ್ಧನ ಬೋಧನೆಗಳನ್ನು ಮತ್ತು ಅದರ ಮೂಲ ಪಾಲಿ ಭಾಷೆಯಲ್ಲಿ ಪಠಿಸಲಾಗುತ್ತಿದೆ. ಇದು ಜಗತ್ತಿನಲ್ಲಿ ಶಾಂತಿ, ಸಹಭಾಗಿತ್ವ ಮತ್ತು ಭ್ರಾತೃತ್ವ ತರುತ್ತದೆ. ಇಂತಹ ಸುಪ್ರಸಿದ್ಧ ಐತಿಹಾಸಿಕ ಸ್ಥಳವಾದ ಸನ್ನತಿಯು ವಿಶ್ವಶಾಂತಿ ಸ್ಥಾಪನೆಗಾಗಿ ನಡೆಯುವ ಈ ಪವಿತ್ರ ಪುಣ್ಯಾ ಕಾರ್ಯಕ್ರಮದಲ್ಲಿ ಸರ್ವ ಬೌದ್ಧ ಉಪಾಸಕ, ಉಪಾಸಕಿಯರು ಆಗಮಿಸಿ ಸದ್ಧಮ್ಮ ಕಾರ್ಯದ ಬೆಳವಣಿಗೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಸಂದೀಪ್ ಕಟ್ಟಿ, ರಮೇಶ್ ಕವಡೆ, ದೇವಿಂದ್ರ ಕುಮಸಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಜಗನ್ನಾಥ ಮುಡಬೂಳಕರ್, ಲೋಹಿತ್ ಮುದ್ದಡಗಿ, ಭಾಗಪ್ಪ ಕೊಲ್ಲೂರು, ಶಿವಮೂರ್ತಿ ಪಾಮನೋರ, ಧರ್ಮಣ್ಣ ಕಟ್ಟಿಮನಿ, ಶ್ರೀಮಂತ ಸೂಗೂರ, ಮೌನೇಶ್, ಗುರು ದಿಗ್ಗಾಂವ, ನಾಗೇಂದ್ರ ಬುರ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಣಧೀರ ಹೊಸಮನಿ ನಿರೂಪಿಸಿದರು.