ವಾಡಿ ಬಿಜೆಪಿ ಕಛೇರಿಯಲ್ಲಿ ಪಂಡಿತ್ ದಿನ ದಯಾಳ್ ಉಪಾಧ್ಯಾಯರ ಸಂಸ್ಮರಣೆ
ನಾಗಾವಿ ಎಕ್ಸಪ್ರೆಸ್
ವಾಡಿ: ಬಿಜೆಪಿ ಕಛೇರಿಯಲ್ಲಿ ಪಂಡಿತ್ ದಿನ ದಯಾಳ್ ಉಪಾಧ್ಯಾಯರ 56ನೇ ಪುಣ್ಯಸ್ಮರಣೆ ಪ್ರಯುಕ್ತ ಪಂಡಿತ್ ಜಿ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ, ಭಾರತ ಕಂಡ ಅದ್ಭುತ ದಾರ್ಶನಿಕ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ, ಸಂಘಟನಕಾರ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ಭಾರತೀಯ ಜನ ಸಂಘದ ಸಂಸ್ಥಾಪಕರಾಗಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯರು1968ರ ಫೆಬ್ರವರಿ 11 ರಂದು ನಿಗೂಢ ರೀತಿಯಲ್ಲಿ ಸಾವನಪ್ಪಿದ್ದರು.
ಅವರ ಪುಣ್ಯಸ್ಮರಣಾ ದಿನವಾದ ಇಂದು ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಕೃತಜ್ಞತೆಯೊಂದಿಗೆ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ನಾವು ಯಾವುದೇ ಪಂಗಡಕ್ಕೆ ಇಲ್ಲವೇ ಜನಾಂಗಕ್ಕೆ ಮೀಸಲಾಗದೆ ಇಡೀ ದೇಶದ ಸೇವೆಗೆ ಕಂಕಣಬದ್ಧರಾಗಿದ್ದೇವೆ. ಈ ದೇಶದ ಪ್ರತಿಯೋರ್ವನೂ ನಮ್ಮ ರಕ್ತ ಕಣಗಳಲ್ಲಿ, ಮಾಂಸ ಖಂಡಗಳಲ್ಲಿ ಸಮ್ಮಿಳಿತಗೊಂಡಿದ್ದಾನೆ. ಇಲ್ಲಿನ ಪ್ರತಿಯೋರ್ವನಿಗೂ ನಾನು ಭಾರತ ಮಾತೆಯ ಪುತ್ರನೆಂಬ ಹೆಮ್ಮೆ ಉದಯಿಸುವವರೆಗೂ ನಮಗೆ ವಿಶ್ರಾಂತಿ ಎಂಬುದೇ ಇಲ್ಲ ಎಂದು ದಿನ ದಯಾಳ್ ರು ಹೇಳುತ್ತಿದ್ದರು.
ಅವರು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಶಕ್ತಿಯನ್ನು ಪೋಷಿಸಿದರು, ಅವರು ನಿಧನದ ನಂತರ ಭಾರತೀಯ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ಇಂದಿನ ಬಿಜೆಪಿ ಉದಯಕ್ಕೆ ಕಾರಣವಾಯಿತು. ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲ ಹೊಂದಿದವರು, ದುರ್ಬಲ ಜನಾಂಗದ ಉನ್ನತಿಗೆ ತ್ಯಾಗ ಮಾಡುವ ಅವಶ್ಯಕತೆಯಿದೆ. ಮೇಲ್ವರ್ಗ– ಕೆಳವರ್ಗ ಎಂಬ ದೊಡ್ಡ ಕಂದಕ ಸಮಾಜದಲ್ಲಿ ಉಂಟಾಗಿದೆ. ಈ ಕಂದಕ ತೊಡೆದು ಹಾಕಲು ಪರಸ್ಪರ ಹೊಂದಾಣಿಕೆ ಅಗತ್ಯ. ಒಬ್ಬರಿಗೊಬ್ಬರು ಶ್ರಮಿಸುವುದು ಅಗತ್ಯ ಎಂಬುವುದು ಪಂಡಿತ ದೀನದಯಾಳ್ ಅಶಯವಾಗಿತ್ತು. ಅರ್ಥಶಾಸ್ತ್ರ, ರಾಜಕೀಯ ಮತ್ತು ಸಾಮಾಜ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪಂಡಿತ ದೀನದಯಾಳ್ ಉಪಾದ್ಯಾಯ ಅವರ ಕೊಡುಗೆ ಅನನ್ಯ. ಗ್ರಾಮೀಣ, ದುರ್ಬಲ ಮತ್ತು ಶೋಷಿತರ ಉನ್ನತಿಯಿಂದ ಮಾತ್ರ ಭಾರತ ಬಲಿಷ್ಠವಾಗುವುದು ಎಂಬ ಸ್ಪಷ್ಟ ಕಲ್ಪನೆ ಅವರದಾಗಿತ್ತು ಎಂದು ಹೇಳಿದರು.
1968ರ ಫೆಬ್ರವರಿ 11 ರಂದು ಮೊಘಲ್ ಸರಾಯ್ ರೈಲು ನಿಲ್ದಾಣದಲ್ಲಿ ದೀನದಯಾಳರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ಬಹು ದೊಡ್ಡ ದುರಂತವಾಯಿತು.ಅವರ ಕನಸು ನನಸು ಮಾಡುವ ಶ್ರದ್ಧೆ ನಮ್ಮಲ್ಲಿ ನಿರಂತರವಾಗಿರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಬಿಜೆಪಿ ವಿಠಲ ವಾಲ್ಮೀಕಿ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಅರ್ಜುನ ಕಾಳೆಕರ, ಶಿವಶರಣಪ್ಪ ಶೆಟಗಾರ, ಅಶೋಕ ಪಂಚಾಳ, ಸತೀಶ್ ಸಾವಳಗಿ, ಪ್ರೇಮ ರಾಠೋಡ, ರಮೇಶ್ ಜಾಧವ, ಗಣಪತ್ ಚವ್ಹಾಣ, ವಿಶ್ವನಾಥ ನಾಯಕ, ಸುಭಾಷ ರಾಠೋಡ ಸೇರಿದಂತೆ ಇತರರು ಇದ್ದರು.