ತಾಲೂಕು ಆಡಳಿತ ವತಿಯಿಂದ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ, ಚಿತ್ತಾಪುರ ತಾಲೂಕಿನಲ್ಲಿ 51 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಹಕ್ಕು ಪತ್ರಗಳ ವಿತರಣೆ: ತಹಸೀಲ್ದಾರ್ ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಸರ್ಕಾರ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಹಾಗೂ ಹಕ್ಕು ಪತ್ರಗಳನ್ನು ವಿತರಿಸಿದೆ ಈ ನಿಟ್ಟಿನಲ್ಲಿ ಚಿತ್ತಾಪುರ ತಾಲೂಕಿನಲ್ಲಿ 51 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ತಹಸೀಲ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಸಮಾಜದ ಆರಾಧ್ಯ ದೈವ ಸೇವಾಲಾಲ್ ಮಹಾರಾಜರು ಪಶುಪಾಲಕರಾಗಿದ್ದು 3751 ಪಶುಪಾಲನೆ ಮಾಡಿ ಪಶು ಸಂಪತ್ತು ಸಂರಕ್ಷಣೆ ಮಾಡಿದ್ದಾರೆ ಎಂದರು. ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಬಂಜಾರ ಸಮಾಜ, ಶ್ರೀಕೃಷ್ಣನಿಗೆ ಕೊಳಲು ಮಾಡಿ ಕೊಟ್ಟ ಬಂಜಾರ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಪಾಂಡು ರಾಠೋಡ ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ಸೇವಾಲಾಲರು ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ, ಅವರ ಚಿಂತನೆಗಳು ಈಗಿನ ಸಮಕಾಲೀನ ಸಮಾಜಕ್ಕೆ ರಾಮಬಾಣವಾಗಿದೆ. ಸತ್ಯದ ಹಾದಿ ತೋರಿಸಿದ ಮಹಾ ಕಾಲಜ್ಞಾನಿ, ಪರಿಸರವಾದಿ ಹಾಗೂ ಪವಾಡ ಪುರುಷರಾಗಿದ್ದರು ಎಂದು ಹೇಳಿದರು. ಈಗ ಅವರು ಇಲ್ಲದಿದ್ದರೂ ಅವರ ಚಿಂತನೆಗಳಿಂದ ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳಿಂದ ಅಜರಾಮರವಾಗಿದ್ದಾರೆ ಎಂದರು.
ಎಲ್ಲರೂ ಸೇವಾಲಾಲ್ ಅವರ ಸತ್ಯದ ಹಾದಿಯಲ್ಲಿ ಮುನ್ನಡೆದು ಕಾಯಕ ಜೀವಿಗಳಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸೇವಾಲಾಲ್ ಮಹಾರಾಜರ ವೇಷ ಧರಿಸಿದ ಲಖನ್ ಚವ್ಹಾಣ ವೇದಿಕೆಗೆ ಕಳೆ ತಂದಿತ್ತು. ಪ್ರಾರ್ಥನಾ ಶಾಲೆಯ ಮಕ್ಕಳ ಬಂಜಾರ ನೃತ್ಯ ಎಲ್ಲರನ್ನು ಆಕರ್ಷಿಸಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಿಪಿಐ ಚಂದ್ರಶೇಖರ ತಿಗಡಿ, ನಟರಾಜ್ ಲಾಡೆ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಆಹಾರ ನಿಗಮದ ನಿರ್ದೇಶಕ ರವಿ ಸೌಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಗೌರವಾಧ್ಯಕ್ಷ ಗೋಪಾಲ ರಾಠೋಡ, ಪ್ರದಾನ ಕಾರ್ಯದರ್ಶಿ ವಿಜಯಕುಮಾರ್ ಚವ್ಹಾಣ, ಮಲ್ಲಿಕಾರ್ಜುನ ಕಾಳಗಿ, ರಾಜು ರೇವು ಚವ್ಹಾಣ, ಮೋತಿಲಾಲ್ ನಾಯಕ, ಸುಭಾಷ್ ಜಾಧವ, ತುಕಾರಾಮ ರಾಠೋಡ, ಚಂದು ಜಾಧವ, ತಾರಾನಾಥ್ ನಾಯಕ, ಮನೋಜ್ ರಾಠೋಡ, ಶಿವರಾಜ್ ಚವ್ಹಾಣ, ಚಂದರ್ ಚವ್ಹಾಣ, ನಾಗರೆಡ್ಡಿ ಗೋಪಸೇನ್, ಆರ್.ಸಿ.ಲಮಾಣಿ, ರವಿ ಭೀಮಾ ರಾಠೋಡ, ಶಂಕರ್ ಚವ್ಹಾಣ, ದೇವಿದಾಸ ಚವ್ಹಾಣ, ಆಕಾಶ ಚವ್ಹಾಣ, ರವಿ ಜಾಧವ, ಈರಣ್ಣ ನಾಯಕ, ಮಹಾದೇವ ರಾಠೋಡ, ಶಿವರಾಮ್ ಚವ್ಹಾಣ, ರಾಜಣ್ಣ ಕರದಾಳ, ಭೀಮರಾಯ ಹೊತಿನಮಡಿ, ಜಗದೀಶ್ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪುರಸಭೆ ಸದಸ್ಯ ಜಗದೀಶ್ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶಂಕರ ಕಣ್ಣಿ ಸ್ವಾಗತಿಸಿದರು, ಸಂತೋಷ ಶಿರನಾಳ್ ನಿರೂಪಿಸಿದರು, ತಾಪಂ ಮಾಜಿ ಸದಸ್ಯ ನಾಮದೇವ ರಾಠೋಡ ವಂದಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.