Oplus_0

ಯರಗಲ್ ಅಂಬಿಗರ ಚೌಡಯ್ಯ ಬ್ಯಾನರ್ ಹರಿದು ವಿಠಲ್ ಹೇರೂರು ಚಿತ್ರ ವಿರೂಪಗೊಳಿಸಿದ ಕಿಡಿಗೇಡಿಗಳನ್ನು 24 ಘಂಟೆಯಲ್ಲಿ ಬಂಧಿಸಲು ಕೋಲಿ ಸಮಾಜ ಆಗ್ರಹ

ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ

ತಾಲೂಕಿನ ಯರಗಲ್ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದಲ್ಲಿನ ಬ್ಯಾನರ್ ಹರಿದು, ವಿಠಲ್ ಹೇರೂರು ಚಿತ್ರ ವಿರೂಪಗೊಳಿಸಿ ಸುಟ್ಟು ಅವಮಾನಿಸಿದ ಕಿಡಿಗೇಡಿಗಳನ್ನು 24 ಘಂಟೆಯಲ್ಲಿ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ ಆಗ್ರಹಿಸಿದ್ದಾರೆ.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಶರಣರಲ್ಲಿಯೇ ನಿಜಶರಣ ಎಂದು ಕರೆಯಿಸಿಕೊಂಡ ಸಮಾಜ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದಿದ್ದ ಅಂಬಿಗರ ಚೌಡಯ್ಯ ಹಾಗೂ ಕೋಲಿ ಸಮಾಜದ ಸ್ವಾಭಿಮಾನ ಸಿಂಹ ಎಂದು ಕರೆಯಿಸಿಕೊಂಡ ಹುಟ್ಟು ಹೋರಾಟಗಾರರಾಗಿದ್ದ ದಿ.ವಿಠಲ್ ಹೇರೂರು ಹಾಗೂ ಮಾತಾ ಮಾಣಿಕೇಶ್ವರಿ ಅವರು ಇರುವ ಬ್ಯಾನರ್ ಬುಧವಾರ ರಾತ್ರಿ ಹರಿದು ಅವಮಾನ ಮಾಡಿರುವ ಘಟನೆ ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.

ಅಂಬಿಗರ ಚೌಡಯ್ಯ ಇರುವ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಈ ನಿಟ್ಟಿನಲ್ಲಿ ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.

ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟೀಕಾರ ಮಾತನಾಡಿ, ಅಂಬಿಗರ ಚೌಡಯ್ಯ, ಮಾತಾ ಮಾಣಿಕೇಶ್ವರಿ ಹಾಗೂ ವಿಠಲ್ ಹೇರೂರು ಅವರು ಇರುವ ಬ್ಯಾನರ್ ಹರಿದು, ವಿಠಲ್ ಹೇರೂರು ಅವರ ಚಿತ್ರ ವಿರೂಪಗೊಳಿಸಿ ಗ್ರಾಮದ ಶಾಂತಿಯನ್ನು ಕದಡಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಇಲ್ಲದಿದ್ದರೆ ಕೋಲಿ ಸಮಾಜದ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಸೀಬಾ, ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್, ಪದಾಧಿಕಾರಿಗಳಾದ ತಮ್ಮಣ್ಣ ಡಿಗ್ಗಿ, ಸಾಬಣ್ಣ ಡಿಗ್ಗಿ, ಕಾಶಪ್ಪ ಡೋಣಗಾಂವ, ದಶರಥ ದೊಡ್ಡಮನಿ, ತಿಪ್ಪಣ್ಣ ಇವಣಿ, ಸಾಬಣ್ಣ ನಾಲವಾರ, ಅಂಬು ಹೊಳಿಕಟ್ಟಿ, ಆನಂದ ಯರಗಲ್, ಶರಣು ಅರಣಕಲ್, ಸಂಗು ನಾಟೀಕಾರ ಯರಗಲ್, ರವಿ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!