ಹಲಕರ್ಟಿ ಗ್ರಾಮಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ಎಸ್.ಯು.ಸಿ.ಐ (ಕಮ್ಯುನಿಷ್ಟ್) ಪಕ್ಷದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಪ್ರತಿವರ್ಷವೂ ಬೇಸಿಗೆ ಬರುತ್ತಿದ್ದಂತೆ ನೀರಿನ ಅಭಾವದಿಂದಾಗಿ ಜನಗಳು ಪರದಾಡುವಂತಾಗುತ್ತದೆ. ಪ್ರತಿವರ್ಷವೂ ಕೂಡ ಜನರು ಗ್ರಾಮ ಪಂಚಾಯಿತಿಗೆ ಮನವಿ, ಹೋರಾಟಗಳ ಮೂಲಕ ಮನವಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಸಮಸ್ಯೆ ಬಗೆಹರಿಯದೆ, ತಾತ್ಕಾಲಿಕ ಪರಿಹಾರ ಸಿಗುತ್ತದೆ ಹೀಗಾಗಿ ಗ್ರಾಮಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಎಸ್.ಯು.ಸಿ.ಐ (ಕಮ್ಯುನಿಷ್ಟ್) ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವರ್ಷವೂ ಕೂಡ ಬೇಸಿಗೆ ಪ್ರಾರಂಭದಲ್ಲಿಯೇ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜನರು ಸಾಕಷ್ಟು ಸಮಸ್ಯೆಗಳುನ್ನು ಎದುರಿಸುವಂತಾಗುತ್ತಿದೆ. ಗ್ರಾಮದ ಜನರೆಲ್ಲ ಸೇರಿ ಎಸ್.ಯುಸಿಐ (ಸಿ) ಪಕ್ಷದ ನೇತೃತ್ವದಲ್ಲಿ ಮಾರ್ಚ್ 9 ರಂದು ಗ್ರಾಮ ಪಂಚಾಯಿತಿಗೆ ಪ್ರತಿಭಟನೆ ಮೂಲಕ ಮನವಿ ಪತ್ರ ಸಲ್ಲಿಸಿದರು. ಇದಾದ ನಂತರ ಒಂದು ಬೋರ್ ವೆಲ್ ಕೊರೆದಿದ್ದರು ಸಹ ನೀರು ಬಿದ್ದಿಲ್ಲ. ಆ ಕಾಮಗಾರಿಯೂ ಅಲ್ಲಿಗೆ ನಿಂತು ಹೋಗಿದೆ. ಸದ್ಯ ಟ್ಯಾಂಕ್ ಗಳ ಮೂಲಕ ಬಡಾವಣೆಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ. ಹಲವಾರು ವರ್ಷಗಳಿಂದ ಇದೇ ರೀತಿಯಲ್ಲಿ, ನಡೆದುಕೊಂಡು ಹೋಗುತ್ತಿದ್ದು ಯಾವುದೇ ರೀತಿಯ ಶಾಶ್ವತ ಪರಿಹಾರ ಕೈಗೊಳ್ಳದೆ ಇರುವುದು ಜನಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಹಲಕರ್ಟಿ ಗ್ರಾಮಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕು, ಗ್ರಾಮದ ವಾರ್ಡ್ 01 ರಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ, ಅಂಬೇಡ್ಕರ್ ನಗರಕ್ಕೆ ಮಹಿಳಾ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ, ವಾರ್ಡ್ ನಂ.1 ಲಕ್ಷ್ಮೀ ನಗರದಲ್ಲಿ ಮಹಿಳಾ ಸಾರ್ವಜನಿಕ ಶೌಚಾಲಯ ನಿರ್ಮಿಸಿ, ಹಲಕರ್ಟಿ ಗ್ರಾಮಕ್ಕೆ ಎಲ್ಲಾ ಬಸ್ ಗಳು ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ (ಕಮ್ಯುನಿಷ್ಟ್) ವಾಡಿ ಸ್ಥಳೀಯ ಸಮಿತಿ ಸದಸ್ಯರಾದ ಗೌತಮ ಪರತೂರಕರ್, ಚೌಡಪ್ಪ ಗಂಜಿ, ಭೀಮಪ್ಪ ಮಾಟ್ನಳ್ಳಿ, ಶಿವಕುಮಾರ್ ಆಂದೋಲಾ, ವೀರೇಶ್ ನಾಲವಾರ, ಮಹಾಂತೇಶ್ ಹುಳಗೊಳ್, ಸಾಬಣ್ಣ ಸುಣಗಾರ ಸೇರಿದಂತೆ ಗ್ರಾಮಸ್ಥರಿದ್ದರು.