Oplus_131072

ಚಿತ್ತಾಪುರದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ರಸ್ತೆ ತಡೆ ಪ್ರತಿಭಟನೆ, ಏರಿಸಿದ ಎಲ್ಲಾ ದರಗಳನ್ನು ಹಿಂಪಡೆಯಲು ಮುಖಂಡರು ಒತ್ತಾಯ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಬೆಲೆ ಏರಿಕೆ, ತೆರಿಗೆ ಹೆಚ್ಚಳದ ಸರಕಾರದ ನೀತಿಗಳ ವಿರುದ್ಧ ಹಾಗೂ ಏರಿಸಿದ ಬೆಲೆಯನ್ನು ಹಿಂಪಡೆಯಲು ಆಗ್ರಹಿಸಿ, ಅಲ್ಪಸಂಖ್ಯಾತರಿಗೆ ಸಂವಿಧಾನ ಬಾಹಿರವಾಗಿ ಕಾಮಗಾರಿಗಳಲ್ಲಿ ಮೀಸಲಾತಿಯನ್ನು ಆಕ್ಷೇಪಿಸಿ, ಎಸ್‌ಸಿ, ಎಸ್‌ಟಿ ಮೀಸಲು ಹಣದ ದುರ್ಬಳಕೆಯನ್ನು ಖಂಡಿಸಿ ಮತ್ತು ಬಿಜೆಪಿಯ 18 ಶಾಸಕರ ಅಮಾನತನ್ನು ಖಂಡಿಸಿ ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ನೇತೃತ್ವದಲ್ಲಿ ಮುಖಂಡರು ಸೋಮವಾರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಬೆಲೆ ಏರಿಕೆಯಿಂದ ಜನರ ಮೇಲೆ ಹೊರೆ ಬಿದ್ದಿದೆ. ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ, ಸ್ಟಾಂಪ್ ಶುಲ್ಕ, ಮದ್ಯದ ದರ ಹೆಚ್ಚಳವು ಜನಸಾಮಾನ್ಯರು, ಮಧ್ಯಮ ವರ್ಗದವರ ಬದುಕಿಗೆ ಕೊಡಲಿ ಏಟಿನಂತೆ ಎರಗಿದೆ, ದಿನೇದಿನೇ ಹೊಸ ಹೊಸ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಡೀಸೆಲ್ ದರವೂ ಹೆಚ್ಚಿದ್ದು, ದಿನಬಳಕೆ ವಸ್ತುಗಳು, ಸರಕು ಸಾಮಗ್ರಿಗಳ ದರವೂ ಏರಿಕೆ ಕಂಡಿದೆ. ಆದ್ದರಿಂದ ಸರಕಾರವು ಈ ಕೂಡಲೇ ಏರಿಸಿದ ಎಲ್ಲಾ ದರಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಸರಕಾರಿ ಕಾಮಗಾರಿಗಳಲ್ಲಿ ಶೇ 4ರಷ್ಟು ಮೀಸಲಾತಿ ಕೊಡುವ ಸರಕಾರದ ತುಷ್ಟಿಕರಣದ ನಿರ್ಧಾರವನ್ನು ಬಿಜೆಪಿ ವಿರೋಧಿಸುತ್ತದೆ. ಡಾ.ಬಿ.ಆರ್.ಅಂಬೇಡ್ಕರವರು ರಚಿಸಿದ ನಮ್ಮ ಸಂವಿಧಾನದಲ್ಲಿ ಧರ್ಮ ಆಧರಿತ ಮೀಸಲಾತಿ ಕೊಡಲು ಅವಕಾಶವಿಲ್ಲ, ಇದರ ನಡುವೆ ಮೀಸಲಾತಿ ನೀಡಲಾಗಿದೆ. ಇದು ಅತ್ಯಂತ ಖಂಡನಾರ್ಹ. ಇದಿಷ್ಟೇ ಅಲ್ಲ, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ಬದಲು 30 ಲಕ್ಷ ಕೊಡುವುದಾಗಿ ತಿಳಿಸುವುದು, ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆಗೆ ಸಂಬಂಧಿಸಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದು ಸರಿಯೇ ಎಂದು ಪ್ರಶ್ನೆ ಮಾಡಲೇಬೇಕಾಗಿದೆ. ಈ ಸರಕಾರ ತುಷ್ಟಿಕರಣದ ನೀತಿಯನ್ನು ಅನುಸರಿಸಿ ಕರ್ನಾಟಕ ಜನರಿಗೆ ಪಕ್ಷಪಾತ ಮತ ಬೇದ ಹಾಗೂ ಜನರಲ್ಲಿ ಧರ್ಮ ಧರ್ಮಗಳಲ್ಲಿ ಎತ್ತುಕಟ್ಟುವ ಕೆಲಸ ಈ ಸರ್ಕಾರ ಮಾಡುತ್ತಿದೆ ಎಂದು ಕಿಡಿ ಕಾರಿದರು.

ಧರ್ಮ ಆಧಾರಿತ ಮೀಸಲಾತಿ ಕೊಡಲಾಗದು ಎಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್‌ಗಳೂ ತೀರ್ಪು ಕೊಟ್ಟಿವೆ. ಇದು ಸಂವಿಧಾನ ವಿರೋಧಿ ಎಂಬುದು ಗೊತ್ತಿದ್ದರೂ ನಾಡಿನ ಹಿಂದೂಗಳ ಮೇಲೆ ದೌರ್ಜನ್ಯ- ಅವಮಾನ ಮಾಡುವ ನಿರ್ಧಾರ ಖಂಡಿತ ಅಕ್ಷಮ್ಯ ಅಪರಾವಾಗಿದೆ. ಸರಕಾರವು ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ರಾಜ್ಯ ಸರಕಾರವು ತನ್ನ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಟ್ಟ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಅದರಲ್ಲೂ ಪ್ರಮುಖವಾಗಿ ಗ್ಯಾರಂಟಿ ಸಂಬಂಧ ಬಳಸುತ್ತಿದೆ. ಇದು ಅತ್ಯಂತ ಖಂಡನಾರ್ಹ. ಸುಮಾರು 39 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದರಿಂದ ಪರಿಶಿಷ್ಟ ಜಾತಿ- ಪಂಗಡಗಳ ಸಮುದಾಯದ ಜನರಿಗೆ ತೀವ್ರ ಅನ್ಯಾಯವಾಗಿದೆ. ಮುಂದೆ ಈ ಮೊತ್ತವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಮತ್ತು ಈಗಾಗಲೇ ಬಳಸಿದ ಮೊತ್ತವನ್ನು ಮತ್ತೆ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು. ಪರಿಶಿಷ್ಟ ಸಮುದಾಯಕ್ಕೆ ಭೂಮಿ ಖರೀದಿ, ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿಗಳ ಶಿಕ್ಷಣದಂಥ ಕಾರ್ಯಕ್ರಮಗಳಿಗೆ ಇದನ್ನು ಬಳಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಹಿರಿಯ ನಾಯಕ ಸೋಮಶೇಖರ ಪಾಟೀಲ ಬೆಳಗುಂಪಾ ಮಾತನಾಡಿ, ಕರ್ನಾಟಕದ ವಿಧಾನಸಭೆಯಲ್ಲಿ ಗೌರವಾನ್ವಿತ ಸ್ಪೀಕರ್ ಅವರು ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡುವ ಕುರಿತ ನಿರ್ಧಾರ ಕೈಗೊಂಡಿದ್ದಾರೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ಸ್ಪೀಕರ್ ಅವರು, ಜನರಿಂದ ಆಯ್ಕೆಯಾದ ಶಾಸಕರು ಮಾತ್ರವಲ್ಲ ಕ್ಷೇತ್ರದ ಜನರಿಗೆ ಅವಮಾನ ಮಾಡಿದಂತಾಗಿದೆ. 6 ತಿಂಗಳು 18 ಜನಪ್ರತಿನಿಧಿಗಳನ್ನು ಅಮಾನತು ಮಾಡುವ ಸ್ಪೀಕರ್ ಅವರ ನಡೆ ಸರಿಯಲ್ಲ. ಅಮಾನತಾದವರು ವಿಧಾನಸಭಾ ಸಭಾಂಗಣ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಹಾಗಿದ್ದರೆ ಅವರು ಭಯೋತ್ಪಾದಕರೇ, ನಕ್ಸಲೈಟರೇ ಎಂದು ಜನತೆ ಪ್ರಶ್ನಿಸುವಂತಾಗಿದೆ. ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಇದು ಶಾಸಕರ ಹಕ್ಕು ಮೊಟಕುಗೊಳಿಸುವ, ಹಕ್ಕು ಕಿತ್ತುಕೊಳ್ಳುವ ಕಾರ್ಯ ಎಂದು ಆಕ್ಷೇಪಿಸಲು ಬಯಸುತ್ತೇವೆ. ಸ್ಪೀಕರ್ ಅವರು ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ ಅಮಾನತು ಆದೇಶದಿಂದ ಹಿಂದಕ್ಕೆ ಸರಿಯಬೇಕೆಂದು ಒತ್ತಾಯಿಸಿದರು

ಹಿಂದೆ ಬಿಜೆಪಿ ಸರಕಾರ ಇದ್ದಾಗ ರೈತರಿಗೆ ತಮ್ಮ ಜಮೀನಿಗೆ ಟ್ರಾನ್ಸ್‌ಫಾರ್ಮರ್ ಹಾಕಿಸಲು ಸುಮಾರು 25 ಸಾವಿರ ಖರ್ಚಾಗುತ್ತಿತ್ತು. ಇದೀಗ ಆ ಮೊತ್ತ ಸುಮಾರು 2 ಲಕ್ಷಕ್ಕೆ ಏರಿಕೆ ಕಂಡಿದೆ. ರೈತರು ಕೂಡ ಇದರಿಂದ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಇದೊಂದು ಬೆಲೆ ಏರಿಕೆಯ ಸರಕಾರ ಮಾತ್ರವಲ್ಲ ಬಡವರ ವಿರೋಧಿ ಸರಕಾರ. ಸರಕಾರವು ಈ ಕೂಡಲೇ ತನ್ನ ನಿರ್ಧಾರಗಳನ್ನು ಪುನರ್ ವಿಮರ್ಶಿಸಿ ಜನರಿಗೆ ಆಗುವ ತೊಂದರೆಗಳನ್ನು ಮನಗಂಡು ಪರಿಹಾರ ನೀಡಬೇಕೆಂಬ ಮನವಿ ಪತ್ರವನ್ನು ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರು ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಅವರಿಗೆ ಸಲ್ಲಿಸಿದರು.

ಪುರಸಭೆ ಸದಸ್ಯರಾದ ರಮೇಶ ಬೊಮ್ಮನಳ್ಳಿ, ನಾಗರಾಜ್ ಭಂಕಲಗಿ, ಶಾಮ ಮೇಧಾ, ಪ್ರಭು ಗಂಗಾಣಿ, ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಯುವ ಮೋರ್ಚಾ ಅಧ್ಯಕ್ಷ ದೇವರಾಜ ತಳವಾರ, ಎಸ್.ಸಿ ಮೋರ್ಚಾ ಅಧ್ಯಕ್ಷ ಗುಂಡು ಮತ್ತಿಮುಡ್, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಮುಖಂಡರಾದ ಶರಣಗೌಡ ಭೀಮನಳ್ಳಿ, ಗೋಪಾಲ್ ರಾಥೋಡ, ದೀಪಕ್ ಹೊಸ್ಸುರಕರ್, ಬಾಲಾಜಿ ಬುರಬುರೆ, ಅಣ್ಣಾರಾವ ಬಾಳಿ, ಶರಣು ಜ್ಯೋತಿ, ವೀರಣ್ಣ ಯಾರಿ, ಶ್ರೀಕಾಂತ್ ಸುಲೇಗಾಂವ, ಅಕ್ಕಮಹಾದೇವಿ ನಾಗೇಶ, ಸುರೇಶ ಬೆನಕನಳ್ಳಿ, ಹೀರು ನಾಯಕ, ವಿಶ್ವಾರಾಧ್ಯ ನೆನಕ್ಕಿ, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ಚಂದ್ರು ಕಾಳಗಿ, ಅಂಬಾದಾಸ್ ವಾಡಿ, ಎಂ.ಡಿ ಯುನುಸ್, ರಮೇಶ ಕಾಳನೂರ, ಅಂಬರೀಷ್ ರಂಗನೂರ್, ಶಿವರಾಮ ಚವ್ಹಾಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.

“ಪತ್ರಕರ್ತ ದಿ.ನಾಗಯ್ಯಸ್ವಾಮಿ ಅಲ್ಲೂರ ಸಾವಿಗೆ ನ್ಯಾಯ ಸಿಗಬೇಕು ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, 50 ಲಕ್ಷ ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು”.-ಮಲ್ಲಿಕಾರ್ಜುನ ಎಮ್ಮೆನೋರ್ ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷರು ಕಲಬುರಗಿ.

Spread the love

Leave a Reply

Your email address will not be published. Required fields are marked *

error: Content is protected !!