ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ ಹೊರತು ಹಣ ಮಾಡುವ ಉದ್ದೇಶ ಇಲ್ಲ: ನಾಗರೆಡ್ಡಿ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ ಹೊರತು ಹಣ ಮಾಡುವ ಉದ್ದೇಶ ಅಲ್ಲ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಶ್ರೀಮತಿ ಮಹಾದೇವಮ್ಮ ಬಿ.ಪಾಟೀಲ ಸ್ಮಾರಕ ಪಿಯು ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಇನ್ನೂ ಏನು ಬೇಕು ಅದೆಲ್ಲವೂ ಮಾಡಲು ಸಿದ್ಧನಿದ್ದೇನೆ ಎಂದರು.
ಚಿತ್ತಾಪುರ ಪಟ್ಟಣದ ಶ್ರೀಮತಿ ಮಹಾದೇವಮ್ಮ ಬಿ.ಪಾಟೀಲ ಸ್ಮಾರಕ ಪಿಯು ಕಾಲೇಜು ಎಲ್ಲ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಹೆಮ್ಮೆಯಿಂದ ಹೇಳಬಹುದು. ತಾಲೂಕಿನ ಹಿತದೃಷ್ಟಿಯಿಂದ ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಕೈಜೋಡಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಆಗುವ ನಿಟ್ಟಿನಲ್ಲಿ ನಾಗರಿಕರು ಹಾಗೂ ಪಾಲಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳು ಪಡೆಯಬೇಕಾದರೆ ಉಪನ್ಯಾಸಕರ ಪಾತ್ರ ಪ್ರಮುಖವಾಗಿದೆ, ಉಪನ್ಯಾಸಕರ ಸಮರ್ಪಣೆ ಭಾವ ವಿದ್ಯಾರ್ಥಿಗಳ ಕಠಿಣ ಶ್ರಮ ಇದ್ದಾಗ ಉತ್ತಮ ಫಲಿತಾಂಶ ಬರಲು ಸಾಧ್ಯ ಈ ನಿಟ್ಟಿನಲ್ಲಿ ಜಿಲ್ಲೆಯ ಕೆಲ ಪ್ರತಿಷ್ಠಿತ ಕಾಲೇಜುಗಳಿಗಿಂತ ನಮ್ಮ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ ಎಂದು ಹೇಳಿದರು. ಚಿತ್ತಾಪುರದಲ್ಲಿ ಓದಿ ಹೆಚ್ಚು ಅಂಕಗಳು ಪಡೆದ ವಿದ್ಯಾರ್ಥಿಗಳು ಬೇರೆ ಕಡೆ ಹೆಚ್ಚು ಹಣ ನೀಡಿ ಹೋಗುತ್ತಿರುವುದು ಬೇಸರವನ್ನುಂಟು ಮಾಡಿದೆ ಎಂದು ಹೇಳಿದರು.
ಉಪನ್ಯಾಸಕ ನಾಗರಾಜ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ ಎಂದರು.
ಉಪನ್ಯಾಸಕಿ ತ್ರಿವೇಣಿ ಮಾತನಾಡಿ, ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ, ಆಸಕ್ತಿ ಇರುವ ಕೋರ್ಸ್ ಹಾಗೂ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕಿ ಜ್ಯೋತಿ ಮಾತನಾಡಿ, ವೇದಿಕೆಯ ಮೇಲೆ ಸನ್ಮಾನ ಮಾಡಿಕೊಳ್ಳುವುದಕ್ಕೆ ಒಂದು ವರ್ಷದ ಪರಿಶ್ರಮ ಕಾರಣವಾಗಿದೆ, ನಿತ್ಯ ಕಾಲೇಜಿಗೆ ಬರುವ ಮೂಲಕ ಅನುಮಾನಗಳಿದ್ಜರೆ ಆಗಲೇ ಕೇಳಿ ಪರಿಹಾರ ಕಂಡುಕೊಳ್ಳಬೇಕು, ತರಗತಿಯಲ್ಲಿ ಉಪನ್ಯಾಸಕರು ಹೇಳುವ ಉಪನ್ಯಾಸವನ್ನು ಏಕಾಗ್ರತೆಯಿಂದ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪಾಲಕರ ಪರವಾಗಿ ಸಾಬಣ್ಣ ಮಳಖೇಡ ಮಾತನಾಡಿ, ಪ್ರಯತ್ನ ಪಟ್ಟಾಗ ಫಲ ಸಿಗಲಿದೆ ಎಲ್ಲಾ ಮಕ್ಕಳಲ್ಲಿ ಶಕ್ತಿ ಹಾಗೂ ಸಾಮರ್ಥ್ಯ ಇದ್ದೇ ಇರುತ್ತದೆ. ಯಾರು ದಡ್ಡರಲ್ಲ ಎಲ್ಲರೂ ಪ್ರತಿಭಾವಂತರು ಆಗಿರುತ್ತಾರೆ ಎಂದು ಹೇಳಿದರು.
ಹೆಚ್ಚು ಅಂಕ ಪಡೆದ ಶೀಲಾ ಸುಮಿತ್ರಪ್ಪಾ, ನಂದಿನಿ ಮಲ್ಲಿಕಾರ್ಜುನ, ಉಮಾದೇವಿ ಸಾತಪ್ಪ, ಮಧುಸೂದನ ರೆಡ್ಡಿ ವಿಶ್ವನಾಥ ರೆಡ್ಡಿ, ಶಿರೀಷಾ ಭೀಮಣ್ಣ, ಶ್ವೇತಾ ಸಾಯಬಣ್ಣ, ವಿಜಯಲಕ್ಷ್ಮಿ ದಶರಥ, ವಿಜಯಲಕ್ಷ್ಮಿ ವಿಜಯಕುಮಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಉಪನ್ಯಾಸಕರಾದ ದತ್ತಾತ್ರೇಯ, ಧರನೇಂದ್ರ, ಅಖಿಲೇಶ್, ಲೋಕೇಶ್, ಸೌರಭ್, ಶರಣಗೌಡ, ನಾಗನಾಥ, ಆಶಾರಾಣಿ, ಪಲ್ಲವಿ, ಮೋಯಿನ್, ಶಿಖರೇಶ್ವರ ಸ್ವಾಮಿ, ಕರಣ್ ಸೇರಿದಂತೆ ಪಾಲಕರು ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿನಿ ರೇಣುಕಾ ಪ್ರಾರ್ಥಿಸಿದರು, ಉಪನ್ಯಾಸಕ ಖಾಜಾ ಹುಸೇನ್ ಸ್ವಾಗತಿಸಿದರು, ಪ್ರಾಚಾರ್ಯ ಸೋಮಶೇಖರ ಕಲ್ಲಶೆಟ್ಟಿ ನಿರೂಪಿಸಿದರು.