ಹನುಮಂತ ಯಳಸಂಗಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯರ ವಿರುದ್ಧ ಕಾನೂನು ಕ್ರಮಕ್ಕೆ ದಲಿತ ಸೇನೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶೋಷಿತ ಸಮಾಜದ ದ್ವನಿ, ಸಾಮಾಜಿಕ ಹೋರಾಟಗಾರ ಹನುಮಂತ ಯಳಸಂಗಿರವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮೋಹನ್ ಚಿನ್ನ, ಚಿತ್ತಾಪುರ ಉಪಾಧ್ಯಕ್ಷ ಅಂಬರೀಷ್ ರಂಗನೂರ್, ಕಾರ್ಯದರ್ಶಿ ಸಜ್ಜನ್ ಕುಮಾರ್ ಗಾಯಕವಾಡ ಅವರು ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದ್ದಾರೆ.
ಶೋಷಿತ ಸಮಾಜದ ಪರವಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ನ್ಯಾಯವಾದಿ ಹಾಗೂ ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿರವರ ಮೇಲೆ ಕಳೆದ ಸೆ.2 ರಂದು ಕೆಲ ಮಹಿಳೆಯರು ಅವರ ಹಿಂದಿರುವ ರೌಡಿ ಶೀಟರಗಳ ಕುಮ್ಮಕ್ಕಿನಿಂದ ಕಲಬುರ್ಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಕಲಬುರ್ಗಿಯ ಕೆಲ ಗುಂಡಾ ಪಡೆ ರೌಡಿ ಶೀಟರಗಳು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿರವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕಲಬುರ್ಗಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಗೃಹ ಸಚಿವರು ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೂರು ನೀಡಿದ ಮಹಿಳೆಯರು ಹೈದರಾಬಾದ್ ಕರ್ನಾಟಕದ ಗಣ್ಯ ವ್ಯಕ್ತಿಗಳನ್ನು ರಾಜಕೀಯ ಮುಖಂಡರನ್ನು ಸರ್ಕಾರಿ ನೌಕರರನ್ನು ತಮ್ಮ ಬಲೆಗೆ ಬೀಳಿಸಿ ಹನಿ ಟ್ರಾಪ್ ಎಂದು ಕರೆಯಲ್ಪಡುವ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡು ಹಣ ಲೂಟಿ ಮಾಡುವ ದಂಧೆ ನಡೆಸಿದ್ದಾರೆ. ಕಾರಣ ದೂರು ನೀಡಿದ ಮಹಿಳೆಯರು ಯಾರು, ಅವರ ವಿಳಾಸ ಏನು, ಅವರ ಕಾಲ್ ಡಿಟೇಲ್ಸ್ ಮತ್ತು ಹನುಮಂತ ಯಳಸಂಗಿರವರ ಮೇಲೆ ದೂರು ನೀಡಲು ಪ್ರಚೋದಿಸಿದ ವ್ಯಕ್ತಿಗಳನ್ನು ಕಂಡು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ನ್ಯಾಯ ದೊರಕಿಸುವಂತಾಗಬೇಕು. ಹೋರಾಟಗಾರರು ಮತ್ತು ಸಾಮಾಜಿಕ ಮುಖಂಡರು ಇಂತಹ ಸುಳ್ಳು ಆರೋಪಗಳಿಂದ ಬಾಧಿತರಾಗಬಾರದು, ಆದ್ದರಿಂದ ಈ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಸರಿಯಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಸುಳ್ಳು ಪ್ರಕರಣಗಳು ಕೇವಲ ವ್ಯಕ್ತಿಯ ಮಾನಹಾನಿ ಮಾತ್ರವಲ್ಲ, ಸಮಾಜದಲ್ಲಿ ನ್ಯಾಯದ ಪರವಾಗಿ ಸಾಮಾಜಿಕ ಹೋರಾಟಗಾರರ ಮೇಲಿನ ನಂಬಿಕೆ ಕುಂದಿಸುತ್ತದೆ, ಕಾರಣ ನಿಜವಾದ ತಪ್ಪಿತಸ್ಥರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.