ಬೆಳಗುಂಪಾ ಮೃತ ಶ್ರೀಧರ್ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ನೌಕರಿ ನೀಡಲು ಬಿಜೆಪಿ ಆಗ್ರಹ, ಅಕ್ರಮ ಮರಳುಗಾರಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ ಸಜ್ಜನಶೆಟ್ಟಿ ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ; ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲ ಇದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆಯಿಂದಾಗಿಯೇ ಬೆಳಗುಂಪಾ ಗ್ರಾಮದಲ್ಲಿ ಆಳವಾಗಿ ಅಗೆದ ತಗ್ಗಿನಲ್ಲಿ ಕುರಿಕಾಯಲು ಹೋಗಿದ್ದ ಶ್ರೀಧರ್ ನವಲಕರ್ ಎನ್ನುವಾತ ಬಿದ್ದು ಮೃತಪಟ್ಟಿದ್ದಾನೆ. ಹೀಗಾಗಿ ಮೃತಪಟ್ಟ ಯುವಕನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ದಂಡೋತಿ, ಇವಣಿ, ಭಾಗೋಡಿ, ಕಾಟಮದೇವರಹಳ್ಳಿ, ಬೆಳಗುಂಪಾ ಸೇರಿ ಇನ್ನಿತರ ಗ್ರಾಮಗಳಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದರಲ್ಲಿ ಈ ಭಾಗದ ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರೇ ಶಾಮೀಲಾಗಿದ್ದಾರೆ. ಸಚಿವರ ಸಂಪೂರ್ಣ ಬೆಂಬಲ ಇರುವುದರಿಂದಲೇ ದಂಧೆಕೋರರು ಯಾರಿಗೂ ಅಂಜದೇ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಆ ಭಾಗದ ರೈತರಿಗೆ ಅಂಜಿಸಿ ನಾಲ್ಕೈದು ನೂರು ಎಕರೆ ಭೂಮಿ ಖರೀದಿಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೂ ಪೊಲೀಸ್ ಇಲಾಖೆಯವರು, ಕಂದಾಯ ಇಲಾಖೆಯವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು, ಜಿಲ್ಲಾಧಿಕಾರಿಗಳು ಸಹ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಹೀಗಾಗಿ ಕೂಡಲೇ ಅಕ್ರಮ ಮರಳುಗಾರಿಕೆಯಲ್ಲಿ ಯಾರು ಯಾರು ಶಾಮಿಲಾಗಿದ್ದಾರೆ ಅವರ ಮೇಲೆ ಪ್ರಕರಣ ದಾಖಲಿಸಿ ಅಕ್ರಮ ಮರಳುಗಾರಿಕೆ ದಂಧೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಅಕ್ರಮ ಮರಳುಗಾರಿಕೆ ಎಲ್ಲಿಯಾದರೂ ಹೆಚ್ಚಿನ ಪ್ರಮಾಣದಲ್ಲಿ ನಡಿತಾ ಇದೆ ಅಂದರೇ ಅದು ಚಿತ್ತಾಪುರದಲ್ಲಿ ಮಾತ್ರ ಎನ್ನಬಹುದು. ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು. ಕಾಗಿಣಾ ನದಿ ಮಧ್ಯದಲ್ಲಿ ಏಳೆಂಟು ಕಿ.ಮೀ ರಸ್ತೆ ಮಾಡಿಕೊಂಡು ರಸ್ತೆಯ ಎರಡು ಬದಿಯಲ್ಲಿ ಆಳವಾಗಿ ಹಿಟ್ಯಾಚಿಗಳ ಮೂಲಕ ಅಗೆದು ದೊಡ್ಡ ಮಟ್ಟದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಈ ಭಾಗದ ಸಚಿವರು ಕೂಡ ಒಮ್ಮೇ ಭೇಟಿ ನೀಡಿ ನದಿಯಲ್ಲಿ ತಿರುಗಾಡಿದರೆ ಗೊತ್ತಾಗುತ್ತದೆ ಅಲ್ಲಿ ಎಷ್ಟರ ಮಟ್ಟಿಗೆ ಅಕ್ರಮ ಮರಳುಗಾರಿಕೆ ನಡಿತಾ ಇದೆ ಎನ್ನುವುದು. ಕೂಡಲೇ ಮರಳುಗಾರಿಕೆ ದಂಧೆಯನ್ನ ನಿಲ್ಲಿಸಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಮತಕ್ಷೇತ್ರ ಚಿತ್ತಾಪುರದಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡಿಯುತ್ತಿದೆ. ಅವರ ಬೆಂಬಲಿಗರಿಗೆ ಕಾರ್ಯಕರ್ತರಿಗಷ್ಟೇ ಮರಳುಗಾರಿಕೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಹಿಂದಿನ ಜಿಲ್ಲಾಧಿಕಾರಿಯೊಬ್ಬರು ರಾತ್ರಿ ಸಮಯದಲ್ಲಿ ಕಾಗಿಣಾ ನದಿಗೆ ಭೇಟಿ ನೀಡಿ ತನಿಖೆ ಮಾಡುವಾಗ ಅವರ ಮೇಲೆ ಟಿಪ್ಪರ್ ಹಾಯಿಸುವ ಘಟನೆಗಳು ಕೂಡ ನೋಡಿದ್ದೇವೆ. ಹೀಗಾಗಿ ಚಿತ್ತಾಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇಲ್ಲಿ ಯಾರು ಹೇಳೋರು, ಕೇಳೋರು ಇಲ್ಲ ಎನ್ನುವಂತಾಗಿದೆ. ಅಧಿಕಾರಿಗಳು ಮಾತ್ರ ಯಾರ ಮಾತು ಕೇಳಲ್ಲ. ನಾವು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೆ ಬೆದರಿಕೆ ಕರೆಗಳು ಬರುತ್ತಿವೆ. ಕೆಲವು ದಿನಗಳ ಹಿಂದೆಯೇ ಒಬ್ಬ ಪತ್ರಕರ್ತರು ಮಾಹಿತಿ ಕೇಳಿದಕ್ಕೆ ಅವರಿಗೆ ಬೆದರಿಕೆ ಹಾಕಿದ್ದರಿಂದ ಅವರು ಮನನೊಂದು ಸಾವನ್ನಪಿದ್ದಾರೆ. ಇದಕ್ಕೆ ಕಾರಣ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಇಟಗಿ, ನಾಗರಾಜ ಹೂಗಾರ, ನಗರಾಧ್ಯಕ್ಷ ಆನಂದ ಪಾಟೀಲ್ ನರಬೋಳ, ವಕ್ತಾರ ಶಿವರಾಮ ಚವ್ಹಾಣ, ರಾಜು ರಾಠೋಡ ಇದ್ದರು.