ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ದಕ್ಷಿಣ ಕಾಶಿ ಕಾಳಗಿ, ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಯಶಸ್ವಿಗೆ ಟೊಂಕಕಟ್ಟಿ ನಿಂತ ಯುವಪಡೆ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಐತಿಹಾಸಿಕ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಕಾಳಗಿ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಂಡು ಅತ್ಯಾಕರ್ಷಕ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ. ವಿಶೇಷವಾಗಿ ಈ ಬಾರಿ ಜಾತ್ರಾ ಮಹೋತ್ಸವ ಯಶಸ್ವಿಗೆ ಇಲ್ಲಿನ ಯುವಪಡೆ ಟೊಂಕಕಟ್ಟಿ ನಿಂತಿದೆ.
ಏ. 23 ರಂದು ನಡೆಯಲಿರುವ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಲು ಶ್ರೀ ನೀಲಕಂಠ ಕಾಳೇಶ್ವರ ಪುರಾಣ ಸಮಿತಿಯ ಅಧ್ಯಕ್ಷ, ಮಾಜಿ ಜಿ.ಪಂ ಸದಸ್ಯ ರಾಜೇಶ್ ಗುತ್ತೇದಾರ ನೇತೃತ್ವದಲ್ಲಿ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಯುವಪಡೆ ಸಜ್ಜಾಗಿ ನಿಂತಿದೆ. ಮೈಸೂರು ಹಾಗೂ ಮಂಗಳೂರು ದಸರಾ ವೈಭವದಂತೆ ಶ್ರಿ ನೀಲಕಂಠ ಕಾಳೇಶ್ವರ ಜಾತ್ರಾ ವೈಭವ ನೋಡಬುಹುದಾಗಿದೆ.
ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನವನ್ನು ವಿಶೇಷವಾಗಿ ಸಿಂಗಾರಗೊಳಿಸಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ದೇವಸ್ಥಾನದ ಮುಂಬಾಗದಲ್ಲಿ ಚಹಾ ಕಫ್ ನಿಂದ ಆಕರ್ಷಕ ಶಿವಲಿಂಗ ನಿರ್ಮಿಸಲಾಗಿದ್ದು ನೋಡುಗರನ್ನು ಆಕರ್ಷಿಸುತ್ತಿದೆ. ವೈಭವದ ಜಾತ್ರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಪಟ್ಟಣದಲ್ಲೆಡೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ವಿದ್ಯುತ್ ದೀಪಗಳಿಂದ ನಿರ್ಮಿಸಿದ ವರ್ಣರಂಜಿತ ಶಿವ ಪಾರ್ವತಿ, ಗಣೇಶ, ಶಿವಲಿಂಗ ಚಿತ್ರಗಳು ಹಾಗೂ ಸ್ವಾಗತ ಕಮಾನುಗಳು ಗಮನ ಸೆಳೆಯುತ್ತಿವೆ. ಹಾಗೂ ಚಿತ್ತಾಕರ್ಷಕ ವಿದ್ಯುತ್ ದೀಪಾಲಂಕಾರ ನೋಡುಗರನ್ನು ಆಕರ್ಷಿಸುತ್ತಿವೆ.
ಏ.19 ಕ್ಕೆ ಕೃತಿ ಬಿಡುಗಡೆ: ಏ. 19 ರಂದ ಸಾಹಿತಿ, ಲೇಖಕರಾದ ಡಾ. ಹನುಮಾಕ್ಷಿ ಗೋಗಿ ಅವರು ಬರೆದ ಕಾಳಗಿ ಇತಿಹಾಸ ಮತ್ತು ಸಂಸ್ಕೃತಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
ಏ. 20 ಪುರಾಣ ಮಹಾಮಂಗಲ, ಏ. 21 ಕ್ಕೆ ಸಹಸ್ರ ದೀಪೋತ್ಸವ, ಏ.22 ಕ್ಕೆ ಅಗ್ನಿಪೂಜೆ, ಏ.23 ಕ್ಕೆ ಬೆಳಿಗ್ಗೆ ಅಗ್ನಿಪ್ರವೇಶ, ಸಂಜೆ 6 ಕ್ಕೆ ರಥೋತ್ಸವ, ಏ. 24 ಕ್ಕೆ ಅದ್ದೂರಿ ಪಲ್ಲಕ್ಕಿ ಮೆರವಣಿಗೆ, ಸಂಜೆ ಕುಸ್ತಿಗಳು ಜರುಗಲಿವೆ. ಏ. 23, 24, 25 ರಂದು ಧರ್ಮದ ನುಡಿ ಬೆಂಕಿಯ ಕಿಡಿ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ. ಈ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಗಣ್ಯ ಮಾನ್ಯರು ಭಾಗವಹಿಸಲಿದ್ದಾರೆ.
ಪ್ರಥಮ ಬಾರಿ ಶ್ರೀ ನೀಲಕಂಠ ಕಾಳೇಶ್ವರ ಪುರಾಣ: ಕಾಳಗಿಯ ಆರಧ್ಯ ದೈವ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಪ್ರಥಮ ಬಾರಿ ಶ್ರೀ ನೀಲಕಂಠ ಕಾಳೇಶ್ವರ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯ ಹಾಗೂ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಜಗದೇವ ಗುತ್ತೇದಾರ, ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಹಿರಿಯ ಮುಖಂಡರಾದ ವಿಶ್ವನಾಥ ವನಮಾಲಿ, ಶಿವಶರಣಪ್ಪ ಗುತ್ತೇದಾರ ಹಾಗೂ ಇತರೆ ಹಿರಿಯರ ಸಲಹೆಯೊಂದಿಗೆ ಪುರಾಣ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ ಸದಸ್ಯ ರಾಜೇಶ್ ಗುತ್ತೇದಾರ ನೇತೃತ್ವದಲ್ಲಿ, ಯುವ ಮುಖಂಡರಾದ ರಾಘವೇಂದ್ರ ಗುತ್ತೇದಾರ, ಪ್ರಶಾಂತ ಕದಮ, ಶೇಖರ ಪಾಟೀಲ್, ಜಗನ್ನಾಥ ಚಂದನಕೇರಿ, ಹಣಮಂತಪ್ಪ ಕಾಂತಿ, ಸಂತೋಷ ನರನಾಳ, ಮಹೇಶ ಮೋರೆ, ಸಂತೋಷ ಕಡಬೂರ, ಸಂಗಮೇಶ ಬಡಿಗೇರ, ಬಾಬು ನಾಟೀಕರ್, ಸುರೇಶ ಕೋರೆ, ವಿವೇಕ ಗುತ್ತೇದಾರ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಯುವಕರು ಸಾತ್ ನೀಡಿದ್ದಾರೆ.
“ಹಿರಿಯರ ಮಾರ್ಗದರ್ಶನ ಹಾಗೂ ಯುವಕರ ಸಹಕಾರದಿಂದ ಈ ಬಾರಿ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಯಶಸ್ವಿಗೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು ವಿಶೇಷವಾಗಿ ದೀಪಾಲಂಕಾರ, ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ”-ರಾಜೇಶ್ ಗುತ್ತೇದಾರ, ಪುರಾಣ ಸಮಿತಿಯ ಅಧ್ಯಕ್ಷರು ಹಾಗೂ ಜಿ.ಪಂ ಮಾಜಿ ಸದಸ್ಯರು.