ನಾಗಾವಿಯ ತ್ರೈಪುರುಷ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ವಿಶ್ವ ಪಾರಂಪರಿಕ ದಿನಾಚರಣೆ, ನಾಗಾವಿ ವಿಶ್ವವಿದ್ಯಾಲಯದ ಗತ ವೈಭವ ಪುನಃ ಮರುಕಳಿಸಬೇಕಿದೆ: ಗುಂಡೇರಾವ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಚಿತ್ತ ಎಂದರೆ ಜ್ಞಾನ, ಪುರ ಎಂದರೆ ಊರು ಜ್ಞಾನದ ಊರು ಚಿತ್ತಾಪುರವಾಗಿದೆ. ನಾಗಾವಿ ವಿಶ್ವವಿದ್ಯಾಲಯ ವಿಶ್ವದ ಪ್ರಾಚೀನ ಮತ್ತು ದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಆಕ್ಸಫರ್ಡ ಮತ್ತು ಕೆಂಬ್ರಿಜ್ ವಿಶ್ವವಿದ್ಯಾಲಯದಂತೆ ಮೆರೆದ ನಮ್ಮ ನಾಗಾವಿ ವಿಶ್ವವಿದ್ಯಾಲಯದ ಗತ ವೈಭವ ಪುನಃ ಮರುಕಳಿಸಬೇಕಾಗಿದೆ ಎಂದು ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಸಮೀಪದ ಐತಿಹಾಸಿಕ, ಪಾರಂಪರಿಕ ನಾಗಾವಿಯ ತ್ರೈಪುರುಷ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-11 ಮತ್ತು ವಿಶ್ವ ಪಾರಂಪರಿಕ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ನಾವಿಂದು ಕಾಣುವ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ತ್ರೈಪುರುಷ ದೇವಾಲಯವು 60 ಕಂಬಗಳ ವಾಸ್ತುಶಿಲ್ಪವನ್ನು ಹೊಂದಿರುವ ದೇವಾಲಯವಾಗಿದೆ. ಈ ಸ್ಥಳ ಸೇರಿದಂತೆ ಇದರ ಸುತ್ತಲಿನ ಪ್ರದೇಶವು ಹಿಂದೆ ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. ದೇಶ, ವಿದೇಶಗಳಿಂದ ಅನೇಕರು ಅಧ್ಯಯನ ಮಾಡಿದ್ದಾರೆ. ಇಲ್ಲಿ ಮಾನವ ವಿಕಾಸಕ್ಕಾಗಿ ಅಗತ್ಯವಿರುವ 63 ಪ್ರಕಾರದ ಶಿಕ್ಷಣ, ಕಲೆಗಳ ಜ್ಞಾನವನ್ನು ಧಾರೆ ಎರೆಯಲಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದಲ್ಲಿರುವ ಅಪರೂಪದ ವಾಸ್ತುಶಿಲ್ಪ ಹೊಂದಿರುವ ಐತಿಹಾಸಿಕ ಸ್ಮಾರಕಗಳು, ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಅವುಗಳನ್ನು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಯೂನಿಸ್ಕೋ 1964 ರಲ್ಲಿ ಈ ದಿನಾಚರಣೆ ಆಚರಿಸಲು ಪ್ರಾರಂಭಿಸಿದೆ. ನಮ್ಮ ಬಳಗದ ವತಿಯಿಂದ ಜಿಲ್ಲೆಯಲ್ಲಿರುವ ಐತಿಹಾಸಿಕ, ಪಾರಂಪರಿಕ ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆಗೆ ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆ ದೊರೆಯಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ವಿದ್ಯಾವತಿ ಬೊಮ್ಮನಳ್ಳಿ, ಸಕ್ರೆಪ್ಪ ಗುರಿಕಾರ, ಶಂಕ್ರೆಪ್ಪ ಹಯ್ಯಾಳ್, ರವಿ ಗುರಿಕಾರ, ಗಣಪತಿ ಮಸಾಲಿ, ಬಸವರಾಜ ಲೀಣಿ, ಶಂಕರಲಿಂಗ ಪೂಜಾರಿ, ದೇವಪ್ಪ ಪೂಜಾರಿ, ಮಲ್ಲು ಯಾಳವಾರ, ರವಿ ಜೇಳಜಿ, ರಾಜು, ಅಮೋಘ ಸಾಸಬಾಳ, ನಜೀರಸಾಬ್ ಮುಲ್ಲಾ, ದೇವೇಂದ್ರ ಜಮಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.