ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗಾಗಿ 83.52 ಕೋಟಿ ರೂ.ಯೋಜನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರಿಂದ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಪತ್ರ: ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸುಪ್ರಸಿದ್ಧ ದೇವಲ್ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗಾಗಿ 83.52 ಕೋಟಿ ರೂ.ಯೋಜನೆಗೆ ಅನುಮೋದನೆ ನೀಡಿ ತಕ್ಷಣ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಜಿಲ್ಲಾದ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಟಕಣೆ ಮೂಲಕ ತಿಳಿಸಿದ ಅವರು, ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿರುವ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ದತ್ತಾತ್ರೇಯನ ಭಕ್ತರಿಗೆ ಒಂದು ಮಹತ್ವದ ಯಾತ್ರಾ ಕೇಂದ್ರವಾಗಿದ್ದು, ವರ್ಷವಿಡೀ ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ ಆದರೆ ಯಾತ್ರಾ ಕೇಂದ್ರದಲ್ಲಿ ಅಗತ್ಯ ಮೂಲ ಸೌಕರ್ಯಗಳಾದ ಶೌಚಾಲಯ, ವಸತಿ ನಿಲಯ, ಪಾರ್ಕಿಂಗ್, ಕುಡಿಯುವ ನೀರಿನ ಸೌಲಭ್ಯ, ಮಾಹಿತಿ ಕೇಂದ್ರಗಳು, ಪ್ರಸಾದ ಕೌಂಟರ್ ಗಳು ಇಲ್ಲದಿರುವುದರಿಂದ ಯಾತ್ರಾರ್ಥಿಗಳಿಗೆ ಮತ್ತು ಭಕ್ತರಿಗೆ ಅನಾನುಕೂಲವಾಗಿದೆ ಆದ್ದರಿಂದ ಕರ್ನಾಟಕ ಸರ್ಕಾರವು 83.52 ಕೋಟಿ ರೂ. ವೆಚ್ಚದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಶ್ರೀ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಸಾದ ಯೋಜನೆಯಡಿಯಲ್ಲಿ ಅನುದಾನ ಮಂಜೂರಾತಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಯೋಜನಯು ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜತೆಗೆ ದೇವಾಲಯದ ಸುತ್ತಮುತ್ತಲಿನ ಘಾಟ್ ಮತ್ತು ಸಂಗಮ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ಸಂವಿಧಾನದ 371(ಜೆ)ಕಲಂ ಅಡಿಯಲ್ಲಿ ಬರುವ ಕಲ್ಯಾಣ ಕರ್ನಾಟಕ ಪ್ರದೇಶದ ಜನರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳು ಸುಧಾರಿಸಲಿವೆ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಪ್ರಸಾದ ಯೋಜನೆಯಡಿ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರದಿಂದ ಪ್ರಸ್ತಾವನೆಯನ್ನು ಅನುಮೋದಿಸಿ, ಅಗತ್ಯ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ ಎಂದು ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.