ಸಂಕನೂರ ಗ್ರಾಮದ ಸಮೀಪ ಎತ್ತೊಂದು ಚಿರತೆಗೆ ಬಲಿ, ಆತಂಕದಲ್ಲಿ ಗ್ರಾಮಸ್ಥರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಂಕನೂರ ಗ್ರಾಮದ ಸಮೀಪದಲ್ಲಿ ಎತ್ತೊಂದು ಚಿರತೆಗೆ ಬಲಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ರೈತ ಸಿದ್ದಪ್ಪ ಪೂಜಾರಿಗೆ ಸೇರಿದ ಎತ್ತು ಕಳೆದ ಮೂರು ದಿನಗಳಿಂದ ಕಾಣೆಯಾಗಿತ್ತು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ ಆದರೆ ಶುಕ್ರವಾರ ಬೆಳಗ್ಗೆ ಗ್ರಾಮದ ಸಮೀಪದ ಹೊಲವೊಂದರಲ್ಲಿ ಎತ್ತಿನ ಅವಶೇಷ ಕಂಡುಬಂದಿದೆ.
ಅಲ್ಲೂರ.ಬಿ, ಸಂಕನೂರ, ಯಾಗಾಪೂರ, ಬೆಳಗೇರಾ ಗ್ರಾಮಗಳಲ್ಲಿ ಆಗಾಗ ಚಿರತೆ ಪ್ರತ್ಯಕ್ಷವಾಗಿ ದನಕರುಗಳು ಮತ್ತು ಕುರಿಗಳ ಮೇಲೆ ದಾಳಿ ಮಾಡಿದ ಘಟನೆಗಳು ಹಲವು ಬಾರಿ ಜರುಗಿವೆ. ಈಗ ಮತ್ತೇ ಸಂಕನೂರ ಗ್ರಾಮದ ಸಮೀಪ ಚಿರತೆಗೆ ಎತ್ತೊಂದು ಬಲಿಯಾಗದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ಕೂಡಲೇ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡು ಜನರಲ್ಲಿ ಮನೆಮಾಡಿದ ಭಯದ ಆತಂಕವನ್ನು ಹೋಗಲಾಡಿಸಬೇಕು ಎಂದು ಗ್ರಾಮದ ಮುಖಂಡ ಹಣಮಂತ ಸಂಕನೂರ ಒತ್ತಾಯಿಸಿದ್ದಾರೆ.
ಸಂಕನೂರ ಸಮೀಪ ಎತ್ತೊಂದು ಚಿರತೆಗೆ ಬಲಿಯಾದ ವಿಷಯ ಗಮನಕ್ಕೆ ಬಂದಿದೆ, ಸ್ಥಳಕ್ಕೆ ಅರಣ್ಯ ರಕ್ಷಕರನ್ನು ಕಳುಹಿಸಿಕೊಡಲಾಗಿದೆ, ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಸರ್ಕಾರದ ವತಿಯಿಂದ ಸಿಗುವ ಪರಿಹಾರ ಸೌಲಭ್ಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ನಾಗಾವಿ ಎಕ್ಸಪ್ರೆಸ್ ಗೆ ತಿಳಿಸಿದ್ದಾರೆ.