ಚಿತ್ತಾಪುರ ಭಾರಿ ಮಳೆ ಗಾಳಿಗೆ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಬೆಣ್ಣೂರಕರ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಕಳೆದ ಒಂದು ವಾರದ ಹಿಂದೆ ಸುರಿದ ಭಾರಿ ಮಳೆ ಗಾಳಿಗೆ ಶಹಾಬಾದ ರಸ್ತೆಯಲ್ಲಿ ಕಿಂಗ್ ಪ್ಯಾಲೇಸ್ ಹತ್ತಿರ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ವಾಹನಗಳಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆ ಆಗುತ್ತಿದ್ದರೂ ಸಹ ಇಲ್ಲಿವರೆಗೆ ಸಂಬಂಧಪಟ್ಟ ಜೆಸ್ಕಾಂ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಮಾತ್ರ ತೆರವುಗೊಳಿಸುವ ಕೆಲಸ ಮಾಡದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಆಗ್ರಹಿಸಿದ್ದಾರೆ.
ಇದೇ ರಸ್ತೆಯಲ್ಲಿ ಯರಗಲ್ ಕ್ರಾಸ್ ಹತ್ತಿರ ಮರವೊಂದು ಬಿದ್ದು ಒಂದು ವಾರವಾದರೂ ಸಹ ತೆರವುಗೊಳಿಸಿಲ್ಲ ಇಲ್ಲಿ ರಸ್ತೆ ತಿರುವು ಇರುವುದರಿಂದ ಸಂಚಾರ ವಾಹನಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ ಇಷ್ಟಾದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಹೀಗಾಗಿ ಅಧಿಕಾರಿಗಳು ಮೊಬ್ಬಿನಲ್ಲಿದ್ದಾರೆ. ಇಂತಹ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಸಚಿವರು ಮಾಡಬೇಕು ಎಂದು ತಿಳಿಸಿದ್ದಾರೆ.
ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಡಿವೈಎಸ್ಪಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಾರೆ ಮರಗಳು ರಸ್ತೆಯ ಮೇಲೆ ಬಿದ್ದಿರುವ ದೃಶ್ಯ ಕಂಡುಬಂದರೂ ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಕಂಡು ಕಾಣದಂತೆ ಹೋಗುತ್ತಿದ್ದಾರೆ ಇದು ಒಳ್ಳೆಯ ಲಕ್ಷಣವಲ್ಲ ಕೂಡಲೇ ಯಾವುದೇ ಅನಾಹುತ ಸಂಭವಿಸುವ ಮುನ್ನ ಪರಿಹಾರೋಪಾಯ ಕ್ರಮ ಕೈಗೊಳ್ಳಬೇಕು ಎಂದು ಬೆಣ್ಣೂರಕರ್ ಒತ್ತಾಯಿಸಿದ್ದಾರೆ.