ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿತ್ತಾಪುರ ಶೇ.40.53 ಫಲಿತಾಂಶ ಜಿಲ್ಲೆಗೆ 4 ನೇ ಸ್ಥಾನ, ಎಲ್ಲಾ ಸೌಲಭ್ಯಗಳು ಇದ್ದು ಫಲಿತಾಂಶ ಕುಂಠಿತ, ವ್ಯಾಪಕ ಚರ್ಚೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಇದ್ದೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಮಾತ್ರ ಕುಂಠಿತಗೊಂಡಿರುವುದು ಎಲ್ಲರಿಗೂ ಆಶ್ಚರ್ಯ ಮತ್ತು ಬೇಸರವನ್ನುಂಟು ಮಾಡಿದೆ. ತಾಲೂಕಿನಲ್ಲಿ ಎಲ್ಲಾ ಕಡೆ ಶಾಲಾ ಕಟ್ಟಡ ಜೊತೆ ಅಗತ್ಯ ಮೂಲಭೂತ ಸೌಲಭ್ಯಗಳು ಇವೆ ಹಾಗೂ ಶಿಕ್ಷಕರ ಕೊರತೆ ಅಂತೂ ಇಲ್ಲವೇ ಇಲ್ಲ ಆದರೂ ಫಲಿತಾಂಶ ಮಾತ್ರ ಕುಂಠಿತ ಇದೇ ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಶೇ.42.43 ಪಡೆದು ಕಳೆದ ಬಾರಿಗಿಂತಲೂ 1 ಸ್ಥಾನ ಕೆಳಕ್ಕೆ ಕುಸಿದು ರಾಜ್ಯದಲ್ಲೇ 35 ನೇ ಕೊನೆಯ ಸ್ಥಾನ ಪಡೆದುಕೊಂಡಿದೆ. ಈಕಡೆ ಚಿತ್ತಾಪುರ ಕಳೆದ ಬಾರಿ ಶೇ.50.21 ಫಲಿತಾಂಶ ಪಡೆದಿತ್ತು ಆದರೆ ಈ ಬಾರಿ ಶೇ.40.53 ಫಲಿತಾಂಶ ಪಡೆದು ಕಳೆದ ಬಾರಿಗಿಂತಲೂ ಶೇ.10.32 ಫಲಿತಾಂಶ ಮೈನಾಸ್ ಕಂಡಿದೆ ಈ ಮೂಲಕ ಜಿಲ್ಲೆಗೆ 4 ನೇ ಸ್ಥಾನ ಪಡೆದಿರುವುದು ಜಿಲ್ಲಾದ್ಯಂತ ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿ ಉತ್ತಮ ವಾತಾವರಣ ನಿರ್ಮಾಣ ಮಾಡಿದ್ದಾರೆ ಆದರೆ ಫಲಿತಾಂಶ ಮಾತ್ರ ವೃದ್ಧಿಯಾಗುತ್ತಿಲ್ಲ ವರ್ಷದಿಂದ ವರ್ಷಕ್ಕೆ ಫಲಿತಾಂಶ ಕುಸಿಯುತ್ತಿದೆ ಇದಕ್ಕೆ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಕಾರಣವಾಗಿದ್ದು, ಶಿಕ್ಷಣಕ್ಕೆ ಬೇಕಾದ ಸುಸಜ್ಜಿತ ಕಟ್ಟಡ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹಾಗೂ ಅಗತ್ಯ ಶಿಕ್ಷಕರನ್ನು ನಿಯೋಜಿಸಿದ್ದರೂ ಸಹ ಫಲಿತಾಂಶ ಪ್ರಗತಿ ಕಾಣುತ್ತಿಲ್ಲ ಇದಕ್ಕೆ ಶಿಕ್ಷಣ ಇಲಾಖೆ ಉತ್ತರ ನೀಡಬೇಕಿದೆ.
ತಾಲೂಕಿನಲ್ಲಿ ಬಹಳ ವರ್ಷಗಳಿಂದ ಬೇರು ಬಿಟ್ಟಿದ ಹಾಗೂ ಶಿಕ್ಷಣ ಸೇವೆ ಮಾಡುವುದನ್ನು ಬಿಟ್ಟು ರಾಜಕೀಯ ಸೇವೆ ಮಾಡುವ ಹಾಗೂ ಅನಧಿಕೃತ ಗೈರಾಗುವ ಮತ್ತು ಶಾಲಾವಧಿಯಲ್ಲಿ ಹೊರಗಡೆ ಓಡಾಡುವ ಶಿಕ್ಷಕರನ್ನು ಇಲ್ಲಿಂದ ಬೇರೆಡೆಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಸಚಿವರು ಶಿಸ್ತಿನ ಕ್ರಮ ಕೈಗೊಳ್ಳಬೇಕು.
ಫಲಿತಾಂಶ ಕುಸಿತಕ್ಕೆ ಕಾರಣಗಳು: ಈ ಬಾರಿ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಸಲಾಗಿತ್ತು, ವೆಬ್ ಕ್ಯಾಸ್ಟಿಂಗ್ ಅಳವಡಿಕೆ, ಈ ಬಾರಿ ಕೃಪಾಂಕ ಅಂಕ ನೀಡದೆ ಇರುವುದು, ಶಿಕ್ಷಣದ ಗುಣಮಟ್ಟದ ಕೊರತೆ, ಶಿಕ್ಷಕರ ರಾಜಕಾರಣ, ಫಲಿತಾಂಶ ವೃದ್ದಿಗೆ ಕಾರ್ಯಕ್ರಮಗಳು ಹಮ್ಮಿಕೊಳ್ಳದಿರುವುದು ಸೇರಿದಂತೆ ಹಲವು ಕಾರಣಗಳನ್ನು ಚರ್ಚಿಸಲಾಗುತ್ತಿದೆ.
ಫಲಿತಾಂಶ ವೃದ್ದಿಗಾಗಿ ಶಿಕ್ಷಕರ ಸಮಾಲೋಚನೆ ಸಭೆ, 20 ಅಂಶಗಳ ಕಾರ್ಯಕ್ರಮ, ಕಲಿಕಾಸರೆ, ಕೆಕೆಆರ್’ಡಿಬಿ ಯಿಂದ ಅಕ್ಷರ ಆವಿಷ್ಕಾರ, ಅಕ್ಷರ ಮಿತ್ರ ಇಷ್ಟೇಲ್ಲಾ ಯೋಜನೆಗಳು ಜಾರಿಯಲ್ಲಿದ್ದರೂ ಫಲಿತಾಂಶ ಮಾತ್ರ ಕಳಪೆ ಇದೇ ವಿಪರ್ಯಾಸ. ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಶೇ.62 ಫಲಿತಾಂಶ ಬಂದಿತ್ತು ಆದರೆ ವಾರ್ಷಿಕ ಪರೀಕ್ಷೆಯಲ್ಲಿ ಶೇ.40.53 ಫಲಿತಾಂಶ ಬಂದಿದೆ ಇದು ನಮಗೂ ಕೂಡ ಬಹಳ ನಿರಾಶೆ ತಂದಿದೆ ಎಂದು ಬಿಇಒ ಹೇಳಿದರು.
ಫಲಿತಾಂಶ ವಿವರ: ಚಿತ್ತಾಪುರ ತಾಲೂಕಿನಲ್ಲಿ ಸರ್ಕಾರಿ ಶಾಲೆ ಶೇ.34.5, ಅನುದಾನಿತ ಶಾಲೆ ಶೇ.33.8, ಅನುದಾನ ರಹಿತ ಶಾಲೆ ಶೇ.40.7, ಇತರೆ ಸರ್ಕಾರಿ ಶಾಲೆಗಳು ಶೇ.60.4 ಫಲಿತಾಂಶ ಪಡೆದುಕೊಂಡಿವೆ.
ಈ ಬಾರಿಯ ಫಲಿತಾಂಶ ಕುಸಿತಕ್ಕೆ ಕಾರಣಗಳೇನು ಎಂಬುದನ್ನು ವಿಶ್ಲೇಷಣೆ ಮಾಡಿ ಯೋಜನೆಯೊಂದನ್ನು ಸಿದ್ದಪಡಿಸಿ ಅದರ ಮೇಲೆ ಹೆಚ್ಚು ಫೋಕಸ್ ಮಾಡಲಾಗುವುದು. ಈ ಬಾರಿ ಕಡಿಮೆ ಫಲಿತಾಂಶ ಬಂದ ಶಾಲೆಗಳ ಮುಖ್ಯ ಗುರುಗಳಿಗೆ ಹಾಗೂ ಆಯಾ ವಿಷಯ ಶಿಕ್ಷಕರಿಗೂ ಸಹ ನೋಟಿಸ್ ಜಾರಿ ಮಾಡಲಾಗುವುದು ಈ ನಿಟ್ಟಿನಲ್ಲಿ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು ಮುಂದಿನ ವರ್ಷ ಶೇ.70 ರಷ್ಟು ಫಲಿತಾಂಶ ಬರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ನಾಗಾವಿ ಎಕ್ಸಪ್ರೆಸ್ ಜೊತೆ ಮಾತನಾಡುತ್ತಾ ತಿಳಿಸಿದರು.
ಮುಂದಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗಾಗಿ ಈಗಿನಿಂದಲೇ ಶಿಕ್ಷಣ ಇಲಾಖೆ ಯೋಜನೆಗಳು ಹಾಕಿಕೊಂಡು ಅದರಂತೆ ಕಾರ್ಯಪ್ರವೃತ್ತವಾಗಬೇಕಿದೆ ಅಲ್ಲಿವರೆಗೆ ಕಾದುನೋಡಬೇಕಿದೆ.