ಚಿತ್ತಾಪುರ ಪುರಸಭೆ ಸಾಮಾನ್ಯ ಸಭೆ, ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ, ಸಭೆಯಲ್ಲಿ ಗದ್ದಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕೆಲ ಅಭಿವೃದ್ಧಿ ವಿಷಯದಲ್ಲಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡದೇ ಇರುವುದರ ಕುರಿತು ಮತ್ತು ರಸ್ತೆ ಕಾಮಗಾರಿ ಕಳಪೆ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ನಡೆಯಿತು. ಈ ನಡುವೆ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಯಾರು ಏನಂದ್ರು ಎಂಬುದು ತಿಳಿಯದಂತೆ ಆಯಿತು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ, ವಿರೋಧ ಪಕ್ಷದವರಾಗಿ ನಮ್ಮ ವಾರ್ಡ್ ಗಳ ಜೊತೆಗೆ ಪಟ್ಟಣದ ಹಿತದೃಷ್ಟಿಯಿಂದ ಎಲ್ಲಾ ವಾರ್ಡ್ ಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಪ್ರಭು ಗಂಗಾಣಿ ಅವರು ಹೇಳಿದಾಗ ನಿಮ್ಮ ವಾರ್ಡ್ ಬಗ್ಗೆ ಅಷ್ಟೇ ಮಾತನಾಡಿ ಅದು ಬಿಟ್ಟು ಬೇರೆಯವರ ವಾರ್ಡ್ ಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ ಹಾಗೂ ಹಸ್ತಕ್ಷೇಪ ಮಾಡಬೇಡಿ ಎಂದು ಕಾಂಗ್ರೆಸ್ ಸದಸ್ಯರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ ಮತ್ತು ಮಹ್ಮದ್ ರಸೂಲ್ ಮುಸ್ತಫಾ ಅವರು ಪ್ರತ್ಯುತ್ತರ ನೀಡಿದರು.
ನಾವು ಕೇಳುವ ಪ್ರತಿಯೊಂದು ವಿಷಯಕ್ಕೂ ನೀವೇ ಎದ್ದು ನಿಂತು ಉತ್ತರ ನೀಡುವಾಗ ಅಧ್ಯಕ್ಷ ಉಪಾಧ್ಯಕ್ಷರು ಏಕೀರಬೇಕು ಅವರನ್ನು ಕೆಳಗಿಳಿಸಿ ನೀವೇ ಮೇಲೆ ಕುಳಿತುಕೊಳ್ಳಿ ಎಂದು ಕಾಂಗ್ರೆಸ್ ಸದಸ್ಯರಾದ ಶೀಲಾ ಕಾಶಿ, ಚಂದ್ರಶೇಖರ ಕಾಶಿ ಮಲ್ಲಿಕಾರ್ಜುನ ಕಾಳಗಿ ವಿರುದ್ಧ ಬಿಜೆಪಿ ಸದಸ್ಯರಾದ ರಮೇಶ್ ಬೊಮ್ಮನಳ್ಳಿ ಶಾಮಣ್ಣ ಮೇಧಾ ಅವರು ಹಾರಿಹಾಯ್ದರು. ಪ್ರತಿಯೊಂದಕ್ಕೂ ನಮ್ಮ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿರಿ ನಮ್ಮನ್ನು ಅಂಜಿಸುತ್ತಿದ್ದಿರಿ ಗುಂಡಾಗಿರಿ ಮಾಡುತ್ತಿದ್ದೀರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿದ ವಿಷಯಗಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿ, ಬರೀ ಚರ್ಚೆಗಳು ಆಗುತ್ತಿವೆ ಅನುಷ್ಠಾನಕ್ಕೆ ಬರುತ್ತಿಲ್ಲ ಸಮಸ್ಯೆಗಳು ಸಮಸ್ಯೆಗಳಾಗಿಯೇ ಇವೆ ಪರಿಹಾರ ಮಾತ್ರ ಆಗಿಲ್ಲ ಹೀಗಿದ್ದಾಗ ಸಾಮಾನ್ಯ ಸಭೆ ಯಾಕೆ ಮಾಡಬೇಕು ಎಂದು ಸದಸ್ಯ ರಮೇಶ್ ಬೊಮ್ಮನಳ್ಳಿ ಖಾರವಾಗಿ ಪ್ರಶ್ನಿಸಿದರು.
ಕಸ ತೆಗೆಯುವ ಕುರಿತು ವಿಚಾರಣೆ ಮಾಡಿದಾಗ ಟ್ರ್ಯಾಕ್ಟರ್ ರಿಪೇರಿ ನಡೆದಿದೆ ಒಬ್ಬರು ಹೇಳುತ್ತಾರೆ, ಡ್ರೈವರ್ ಇಲ್ಲ ಎಂದು ಹೇಳುತ್ತಾರೆ ಹೀಗಾದಾಗ ಎಸ್ಐ ಗಳು ಏನು ಮಾಡುತ್ತಿದ್ದಾರೆ ಎಂದು ಸದಸ್ಯ ರಮೇಶ್ ಬೊಮ್ಮನಳ್ಳಿ ಪ್ರಶ್ನಿಸಿದಾಗ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ನಿತ್ಯ ಎಸ್ಐಗಳು ಸಮಯಕ್ಕೆ ಸರಿಯಾಗಿ ಹಾಜರೀರಬೇಕು ಇನ್ನೂ ಬೇಜವಾಬ್ದಾರಿ ಸಹಿಸಲ್ಲ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾಮಾನ್ಯ ಸಭೆ ಮಾಡುವ ಉದ್ದೇಶ ಏನು ಹೇಳಿ, ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಅನುಷ್ಠಾನಕ್ಕೆ ಬರಲಿಲ್ಲ ಎಂದರೆ ಹೇಗೆ ಎಂದು ಚಂದ್ರಶೇಖರ ಕಾಶಿ ತರಾಟೆಗೆ ತೆಗೆದುಕೊಂಡರು. ನಮ್ಮ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಚಿವರಿಗೆ ದೂರು ಹೋದರೆ ನೀವು ಏನು ಮಾಡುತ್ತೀರಿ ಎಂದು ಸದಸ್ಯ ಮಲ್ಲಿಕಾರ್ಜುನ ಕಾಳಗಿ ಕಿರಿಯ ಅಭಿಯಂತರರಿಗೆ ತರಾಟೆಗೆ ತೆಗೆದುಕೊಂಡರು. ಕಿರಿಯ ಅಭಿಯಂತರರು ಮತ್ತು ಸಹಾಯಕ ನಡುವೆ ಹೊಂದಾಣಿಕೆ ಆಗುತ್ತಿಲ್ಲ ಎಂದರೆ ಏನರ್ಥ ನೀವೇನು ಗಂಡಹೆಂಡತಿ ಇದ್ದಿರೇನು ಎಂದು ಸದಸ್ಯೆ ಶೀಲಾ ಕಾಶಿ ತೀವ್ರ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪ್ರಮುಖ ಹಾಗೂ ಆಂತರಿಕ ರಸ್ತೆಗಳಲ್ಲಿ ಘನತ್ಯಾಜ್ಯ ವಸ್ತುಗಳು, ಬಂದ್ ಇದ್ದ ವಾಹನಗಳು, ಬಂಡಿಗಳು ನಿಲ್ಲಿಸಿದ್ದರಿಂದ ರಸ್ತೆಗಳು ಕಿರಿದಾಗಿ ಸಂಚಾರಕ್ಕೆ ತೊಂದರೆಯಾಗಿದೆ ಕೂಡಲೇ ರಸ್ತೆ ಬದಿಯಲ್ಲಿದ್ದ ಘನತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಸದಸ್ಯೆ ಶೀಲಾ ಕಾಶಿ ಒತ್ತಾಯಿಸಿದರು. ನಮ್ಮ ವಾರ್ಡ್ ಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಸದಸ್ಯರಾದ ಶಿವರಾಜ್ ಪಾಳೇದ್, ರಮೇಶ್ ಬೊಮ್ಮನಳ್ಳಿ ಅವರು ಆಗ್ರಹಿಸಿದರು.
ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳ ಹಾಗೂ ಸಿಬ್ಬಂದಿಗಳಿಂದ ಕೆಲಸ ಮಾಡಿಸಿ ಎರಡೆರಡು ಜವಾಬ್ದಾರಿ ಒಬ್ಬರಿಗೆ ವಹಿಸಬೇಡಿ, ಕೆಲಸ ಇಲ್ಲದೆ ಓಡಾಡುವ ಸಿಬ್ಬಂದಿಗಳಿಗೆ ಜವಾಬ್ದಾರಿ ನೀಡಿ ಎಂದು ಸದಸ್ಯರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ ಅವರು ಆಗ್ರಹಿಸಿದರು. ತರ್ಕಾರಿ ಮಾರುಕಟ್ಟೆಯಲ್ಲಿನ ಪುಟಪಾತ್ ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಿ ಮದ್ಯದಲ್ಲಿ ಸ್ಟ್ರೀಟ್ ಲೈಟ್ ಹಾಕಬೇಕು ಎಂದು ಶ್ರೀನಿವಾಸರೆಡ್ಡಿ ಪಾಲಪ್ ಪ್ರಸ್ತಾಪಿಸಿದಾಗ ಸದಸ್ಯರಾದ ಶೀಲಾ ಕಾಶಿ ಮತ್ತು ಮಲ್ಲಿಕಾರ್ಜುನ ಕಾಳಗಿ ಅವರು ಧ್ವನಿಗೂಡಿಸಿದರು. ಬಿ ಖಾತಾ ಅರ್ಜಿ ಸ್ವೀಕರಿಸುವ ಕೌಂಟರ್ ಹೆಚ್ಚು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸದಸ್ಯ ರಮೇಶ್ ಬೊಮ್ಮನಳ್ಳಿ ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಅತೀಯಾಬೇಗಂ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಮಹ್ಮದ್ ರಸೂಲ್ ಮುಸ್ತಫಾ, ವಿನೋದ ಗುತ್ತೇದಾರ, ಜಗದೀಶ್ ಚವ್ಹಾಣ, ಪ್ರಭು ಗಂಗಾಣಿ, ಶಾಮಣ್ಣ ಮೇಧಾ, ಸಂತೋಷ ಚೌದರಿ, ಶ್ರೀನಿವಾಸರೆಡ್ಡಿ ಪಾಲಪ್, ಶಿವರಾಜ್ ಪಾಳೇದ್, ಸುಮಂಗಲಾ ಸಣ್ಣೂರಕರ್, ಬೇಬಿ ಸುಭಾಷ್ ಜಾಧವ, ಕಾಶಿಬಾಯಿ ಬೆಣ್ಣೂರಕರ್, ಶಹನಾಜ್ ಬೇಗಂ ಮಹ್ಮದ್ ಯಕ್ಬಾಲ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಲೆಕ್ಕಾಧಿಕಾರಿ ಕ್ರಾಂತಿ ದೇವಿ ವರದಿ ವಾಚಿಸಿದರು.