ರಾಜ್ಯದ ಅತಿಥಿ ಶಿಕ್ಷಕರು-ಉಪನ್ಯಾಸಕರಿಗೆ ಸರ್ಕಾರ ಸಿಹಿ ಸುದ್ದಿ, ಗೌರವ ಧನ 2,000 ರೂ. ಹೆಚ್ಚಳ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅವರ ಬಹುದಿನದ ಬೇಡಿಕೆಯಂತೆ, ಈ ಎಲ್ಲಾ ಅತಿಥಿ ಬೋಧಕರ ಮಾಸಿಕ ಗೌರವಧನವನ್ನು ತಲಾ 2,000 ರೂ.ಗಳಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಈ ಪರಿಷ್ಕೃತ ಗೌರವ ಸಂಭಾವನೆ ಜಾರಿಯಲ್ಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ ಸರ್ಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 10,000 ರೂ. ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10,500 ರೂ. ಗೌರವ ಸಂಭಾವನೆಯನ್ನು ನಿಗದಿಪಡಿಸಿತ್ತು. ಇದೀಗ ಈ ಮೊತ್ತಕ್ಕೆ ಹೆಚ್ಚುವರಿಯಾಗಿ 2,000 ರೂ.ಗಳನ್ನು ಸೇರಿಸಲಾಗಿದ್ದು, ಪರಿಷ್ಕೃತ ಗೌರವ ಸಂಭಾವನೆಯು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 12,000 ರೂ. ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 12,500 ರೂ. ಆಗಲಿದೆ.
ಅಂತೆಯೇ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ 2,000 ರೂ.ಗಳಷ್ಟು ಗೌರವಧನ ಹೆಚ್ಚಳವಾಗಲಿದೆ. ಈ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 12,000 ರೂ. ನಿಗದಿಯಾಗಿತ್ತು. ಇಂದಿನ ಆದೇಶದಿಂದ ಅತಿಥಿ ಉಪನ್ಯಾಸಕರಿಗೆ ಪರಿಷ್ಕೃತ ಗೌರವ ಸಂಭಾವನೆಯು 14,000 ರೂ. ಆಗಲಿದೆ ಎಂದು ತಿಳಿಸಲಾಗಿದೆ.