ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಸರ್ಕಾರ ಕೂಡಲೇ ವಾಪಸ್ ಪಡೆಯಲು ಬಾಲರಾಜ್ ಗುತ್ತೇದಾರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಹೊರಡಿಸಿದೆ. ಕೂಡಲೆ ಆದೇಶ ವಾಪಸ್ ಪಡೆಯಬೇಕು ಎಂದು ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜನೌಷಧಿ ಯೋಜನೆಯಡಿ ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದ ಔಷಧಿಗಳ ವಿತರಣೆಗೆ ಅಡ್ಡಗಾಲು ಹಾಕುವ ಯತ್ನವನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ದಿನೇಶ್ ಗುಂಡೂರಾವ್ ಅವರ ಆರೋಗ್ಯ ಇಲಾಖೆಯಡಿ ಪಿಎಚ್’ಸಿ, ಸಿಎಚ್’ಸಿ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿನ ಸುಮಾರು 200 ಜನೌಷಧಿ ಕೇಂದ್ರಗಳನ್ನು ಮುಚ್ಚಿಸುವ ಮೂಲಕ ಬಡವರ ಹಣ ಹಾಗೂ ಹೆಣದ ಮೇಲೆ ಸವಾರಿ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪಿಎಂಬಿಜೆಪಿ ಯೋಜನೆಯಡಿಯಲ್ಲಿನ ಜನೌಷಧಿ ಕೇಂದ್ರಗಳಲ್ಲಿ ಶೇ. 70–90 ರಷ್ಟು ಕಡಿಮೆ ಬೆಲೆಯಲ್ಲಿ ಜೆನೆರಿಕ್ ಔಷಧಿಗಳನ್ನು ನೀಡಲಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ವಾರ್ಷಿಕವಾಗಿ ಸುಮಾರು 40 ಕೋಟಿ ಉಳಿತಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವು ಬಡವರ ವಿರೋಧಿ ಮಾತ್ರವಲ್ಲದೇ, ಜನತೆಯ ಆರೋಗ್ಯ ರಕ್ಷಣೆ ಮತ್ತು ಬದುಕಿನ ವಿರೋಧಿಯಾಗಿದೆ. ಬಡವರ ತೀರಾ ಸಂಕಷ್ಟದ, ಆರೋಗ್ಯದ ದುಸ್ಥಿತಿಯಲ್ಲಿಯೂ ಕಾಂಗ್ರೆಸ್ ಯಾರ ಲಾಭಕ್ಕಾಗಿ ಈ ಕೃತ್ಯವೆಸಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.