ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮ ಮಾಡದ ವೈದ್ಯರು, ಬಾಣಂತಿಯರು ಪರದಾಟ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳಿಂದ ಕುಟುಂಬ ಯೋಜನೆ ಕಾರ್ಯಕ್ರಮ ಮಾಡುವುದನ್ನು ವೈದ್ಯರು ನಿಲ್ಲಿಸಿದ್ದಾರೆ, ಇದರಿಂದ ಬಾಣಂತಿಯರು ಪರದಾಡುವಂತಾಗಿದೆ ಇದಕ್ಕೆ ಸಂಬಂಧಪಟ್ಟ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕರವೇ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಆರೋಪಿಸಿದ್ದಾರೆ.
ಕುಟುಂಬ ಯೋಜನೆ ಮಾಡಿಸಿಕೊಳ್ಳಲು ಸೋಮವಾರ ಸರ್ಕಾರಿ ಆಸ್ಪತ್ರೆಗೆ ಬಾಣಂತಿಯರು ಆಗಮಿಸಿದ್ದರೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ, ಕೇಳಿದರೆ ಈಗ ಬರ್ತಾರೆ ಆಗ ಬರ್ತಾರೆ ಅಂತ ಸಬೂಬು ಹೇಳಿದ್ದಾರೆ ಉಪವಾಸದಿಂದ ಬಂದಿದ್ದ ಬಾಣಂತಿಯರು ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಪುನಃ ತಮ್ಮ ಮನೆಗಳಿಗೆ ತೆರಳಿದರು. ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗೆ ವಿಚಾರಿಸಿದರೆ ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುತುವರ್ಜಿ ವಹಿಸಿ ಸುಸಜ್ಜಿತ ಹಾಗೂ ಎಲ್ಲಾ ಸೌಲಭ್ಯಗಳ ಜೊತೆಗೆ ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ, ಆದರೆ ಇಲ್ಲಿನ ವೈದ್ಯರು ಮಾತ್ರ ಸಾರ್ವಜನಿಕರಿಗೆ ಸಕಾಲಕ್ಕೆ ತಪಾಸಣೆ ಮತ್ತು ಚಿಕಿತ್ಸೆ ನೀಡುವಲ್ಲಿ ವಿಫಲರಾಗಿದ್ದಾರೆ ಇದರಿಂದ ತಾಲೂಕಿಗೆ ಕೆಟ್ಟ ಹೆಸರು ಬರುತ್ತಿದೆ, ಬಡ ರೋಗಿಗಳು, ಬಾಣಂತಿಯರು ಹಿಡಿ ಶಾಪ ಹಾಕುತ್ತಿದ್ದಾರೆ.
ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಇದ್ದರು ಇಲ್ಲಿಯ ವೈದ್ಯಾಧಿಕಾರಿಗಳ ನಿರ್ಲಕ್ಷದಿಂದ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 50-60 ಜನ ಮಹಿಳೆಯರು ಬೇರೆ ಬೇರೆ ಹಳ್ಳಿಗಳಿಂದ ಪ್ರತಿ ಸೋಮವಾರ ಬಾಣಂತಿಯರು ಬಂದು 4-5 ತಾಸು ಉಪವಾಸ ಕಾದು ಕಾದು ವಾಪಸ್ ಹೋಗುವಂತ ಪರಿಸ್ಥಿತಿ ಉದ್ಭವವಾಗಿದೆ. ಇಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಸರಕಾರಿ ಆಸ್ಪತ್ರೆ ವ್ಯವಸ್ಥೆ ಪೂರ್ತಿ ಹದಗೆಟ್ಟಿದೆ, ಇದನ್ನು ಒಂದು ವಾರದಲ್ಲಿ ಸರಿಪಡಿಸದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಚಿತ್ತಾಪೂರ ತಾಲೂಕು ಘಟಕ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.