ಚಿತ್ತಾಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ವಿಚಾರಣೆ ಮತ್ತೇ ಅ.24 ಕ್ಕೆ ಮುಂದೂಡಿದ ಹೈಕೋರ್ಟ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ಥಳೀಯ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಅ.21 ರಂದು ವಿಚಾರಣೆ ನಡೆದು ಅಂತಿಮ ಆದೇಶ ಹೊರಬೀಳಬಹುದು ಎಂದು ಅಂದುಕೊಂಡಿದ್ದ ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಮತ್ತು ಸದಸ್ಯರಿಗೆ ಮತ್ತೇ ನಿರಾಶೆ ಉಂಟುಮಾಡಿದೆ.
ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬಂಧಿಸಿದಂತೆ ಪುರಸಭೆ ಸದಸ್ಯ ವಿನೋದ ಗುತ್ತೇದಾರ ಅವರು ಹೈಕೋರ್ಟ್ ತಡೆಯಾಜ್ಞೆ ತಂದಿದ್ದರು, ಈಗಾಗಲೇ 7 ಬಾರಿ ವಿಚಾರಣೆ ನಡೆಸಿದ ಹೈಕೋರ್ಟ್ ಈಗ ಮತ್ತೆ ಅಕ್ಟೋಬರ್ 24 ಕ್ಕೆ ಮುಂದೂಡಿದೆ. ಈ ಮೊದಲು ಹೈಕೋರ್ಟ್ ಅ.21 ಕ್ಕೆ ವಿಚಾರಣೆ ನಿಗದಿಪಡಿಸಿತ್ತು ಹೀಗಾಗಿ ಅಂದು ಏನಾದರೊಂದು ತೀರ್ಪು ಹೊರಬೀಳಬಹುದು ಎಂದು ನಿರೀಕ್ಷೆಯಲ್ಲಿದ್ದ ಆಕಾಂಕ್ಷಿ ಅಭ್ಯರ್ಥಿಗಳಿಗೆ ತೀವ್ರ ನಿರಾಶೆ ಉಂಟುಮಾಡಿದೆ.
ಈಗಾಗಲೇ 15 ತಿಂಗಳಿಂದ ಅಧಿಕಾರವಿಲ್ಲದೇ ಖಾಲಿ ಕೈಯಲ್ಲಿ ಕುಳಿತುಕೊಂಡಿದ್ದ ಪುರಸಭೆ ಸದಸ್ಯರಿಗೆ, ಕಳೆದ ಎರಡು ತಿಂಗಳಿಂದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯ ಕೋರ್ಟ್ ತಡೆಯಾಜ್ಞೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೋರ್ಟ್ ತಡೆಯಾಜ್ಞೆ ಯಾವಾಗ ತೆರವುಗೊಂಡು ಚುನಾವಣೆ ನಡೆಯುತ್ತದೆ ಎಂಬುದು ಕಾದು ನೋಡಬೇಕಿದೆ.
ಈಗ ಹೈಕೋರ್ಟ್ ಮತ್ತೇ ಅ.24 ರಂದು ವಿಚಾರಣೆ ಮುಂದೂಡಿದ್ದರಿಂದ ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ ಬೀರಿದೆ. ಅಲ್ಲಿವರೆಗೆ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮತ್ತು ಸದಸ್ಯರಿಗೆ ಟೆನ್ಷನ್ ಅಂತು ತಪ್ಪಿದ್ದಲ್ಲ.