Oplus_0

ಸೆ.30 ರಂದು ದೇವಪ್ಪ ನಂದೂರಕರ್ ವಯೋನಿವೃತ್ತಿಯ ಬೀಳ್ಕೊಡುವ ಸಮಾರಂಭ 

ಅಂಗವಿಕಲತೆ ಮೆಟ್ಟಿ ನಿಂತ ನಂದೂರಕರ್ ಎಲ್ಲರ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ ಎಂದು ಭಾವಿಸಿಕೊಂಡು ಅಂತಹ ಪವಿತ್ರ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವೃತ್ತಿ ಬದ್ಧತೆ, ಪ್ರಾಮಾಣಿಕತೆ ಮತ್ತು ಶಿಸ್ತಿನ್ನು ಅಳವಡಿಸಿಕೊಂಡ ಅಪರೂಪದ ಶಿಕ್ಷಕ ದೇವಪ್ಪ ನಂದೂರಕರ್.

ಹೌದು, ಅಂತಹ ವಿಶಿಷ್ಟ ವ್ಯಕ್ತಿತ್ವವುಳ್ಳ ಶಿಕ್ಷಕ ದೇವಪ್ಪ ನಂದೂರಕರ್ ಚಿತ್ತಾಪುರ ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಸೆ.30 ರಂದು ವಯೋ ನಿವೃತ್ತಿಯಾಗುತ್ತಿದ್ದಾರೆ.

ತಾಲೂಕಿನ ಆಲೂರ ಗ್ರಾಮದಲ್ಲಿ ಕಾಶಪ್ಪ ಹಾಗೂ ಲಚ್ಚಮ್ಮ ಇವರ ಉದರದಲ್ಲಿ 6 ಸೆಪ್ಟಂಬರ್ 1964 ರಲ್ಲಿ ಜನಿಸಿದ ದೇವಪ್ಪ ನಂದೂರಕರ್, ಟಿಸಿಎಚ್, ಬಿಎ ಪದವಿದರರಾದ ಶ್ರೀಯುತರು, 21 ಮಾರ್ಚ್ 1996 ರಲ್ಲಿ ಶಿಕ್ಷಕರಾಗಿ ನೇಮಕಗೊಂಡು ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ವರ್ಷ 2 ತಿಂಗಳು ಸೇವೆ ಸಲ್ಲಿಸಿ, ನಂತರ 9 ಜೂನ್ 2006 ರಲ್ಲಿ ಚಿತ್ತಾಪುರ ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ 4 ತಿಂಗಳ ಸೇರಿದಂತೆ ಒಟ್ಟು 28 ವರ್ಷ 6 ತಿಂಗಳು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಇದೇ ಸೆ.30 ರಂದು ವಯೋ ನಿವೃತ್ತಿರಾಗುತ್ತಿದ್ದಾರೆ.

ಕಟ್ಟಿಸಂಗಾವಿ ಶಾಲೆಯಲ್ಲಿ ವಿಶೇಷವಾಗಿ ಮಕ್ಕಳ ದಾಖಲಾತಿ ಹೆಚ್ಚಿಸುವ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ, ಶಾಲೆ ಬಿಟ್ಟ ಮಕ್ಕಳಿಗಾಗಿಯೇ ಚಿಣ್ಣರ ಅಂಗಳ ಯೋಜನೆ ಬಹಳ ಆಸಕ್ತಿವಹಿಸಿ ನಿತ್ಯ ಮಕ್ಕಳಿಗೆ ಒಬ್ಬೊಬ್ಬರ ಮನೆಯಿಂದ ಊಟವನ್ನು ತರಿಸಿ ಮಕ್ಕಳಿಗೆ ವಿತರಿಸುವ ಕೆಲಸ ಮಾಡಿದ್ದರಿಂದ ಜೇವರ್ಗಿ ತಾಲೂಕಿನಲ್ಲಿಯೇ ಹೆಸರು ಮಾಡಿತ್ತು ಆಗಿನ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ನಂದೂರಕರ್ ತಮ್ಮ ಮನದಾಳದ ಮಾತುಗಳು ಹಂಚಿಕೊಂಡರು.

ಬಸವ ನಗರ ಶಾಲೆ ಕರ್ತವ್ಯಕ್ಕೆ ಹಾಜರಾದಾಗ ಕೇವಲ ಒಂದೇ ಕೋಣೆಯಿತ್ತು, ಆಗ ಕೋಣೆಗಳ ಸಂಖ್ಯೆ ಹೆಚ್ಚು ಮಾಡಬೇಕೇಂಬ ಹಂಬಲ ನನ್ನಲ್ಲಿ ಇತ್ತು, ಆಗಿನ ಮುಖ್ಯಶಿಕ್ಷಕಿ ಕು.ಸರಸ್ವತಿ ಪಾಟೀಲ ಅವರ ಜೊತೆ ಚರ್ಚಿಸಿ ಅವರ ಸಹಕಾರದಿಂದ ಪ್ರಭಾವತಿಬಾಯಿ ನಾರಾಯಣರಾವ್ ಜೋಶಿ ಅವರನ್ನು ಸಂಪರ್ಕಿಸಿ, ಮನವೊಲಿಸಿ ಅವರ ಸಹಕಾರ ಪಡೆದು ಅವರಿಂದ 23 ಗುಂಟೆ ಜಮೀನು ಧಾನದ ರೂಪದಲ್ಲಿ ಪಡೆದುಕೊಂಡು ನಾಲ್ಕು ಕೋಣೆಗಳು ನಿರ್ಮಾಣಗೊಂಡು ಈಗ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದ ಶಾಲೆ ಎಂದು ಬಹಳ ಅಭಿಮಾನದಿಂದ ಹೇಳುತ್ತಾರೆ.

ಕಾರ್ಯಚಟುವಟಿಕೆಗಳು: ನಲಿಕಲಿ ಅಚ್ಚುಕಟ್ಟಾಗಿ ಮಾಡಿ ಎಲ್ಲ ವಿಧಾನಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಮಾಡಲಾಗಿದೆ, ನಾವು ಮಾಡಿದ ನಲಿಕಲಿ ಮಾದರಿ ಕೋಣೆ ವೀಕ್ಷಿಸಲು ಉರ್ದು ನಲಿಕಲಿ ಶಿಕ್ಷಕರು ಆಗಮಿಸಿದ್ದರು. ಶಾಲಾ ದಾಖಲಾತಿ ಹೆಚ್ಚಿಸುವುದಕ್ಕೆ ನಿತ್ಯ ಶ್ರಮಿಸಿದ್ದೇನೆ, ದಾಖಲಾತಿ ಅಷ್ಟೇ ಅಲ್ಲ ಹಾಜರಾತಿಗೂ ಹೆಚ್ಚಿನ ಮುತುವರ್ಜಿ ವಹಿಸಿ ನಿತ್ಯ ಗೈರು ಹಾಜರಾದ ಮಕ್ಕಳ ಮನೆಗೆ ಸ್ವತಃ ಹೋಗಿ ಮಕ್ಕಳ ಹಾಗೂ ಪಾಲಕರ ಮನವೊಲಿಸಿ ಪುನಃ ಶಾಲೆಗೆ ಹಾಜರಾಗುವಂತೆ ಮಾಡಿದ್ದೇನೆ, ಹೀಗಾಗಿ ಚಿತ್ತಾಪುರ ಪಟ್ಟಣದಲ್ಲಿಯೇ ಅತಿ ಹೆಚ್ಚು ದಾಖಲಾತಿ ಮತ್ತು ಹಾಜರಾತಿ ಇರುವ ಶಾಲೆ ಅದು ಬಸವ ನಗರದ ಶಾಲೆ ಎಂದು ಬಹಳ ಹೆಮ್ಮೆಯಿಂದ ಹೇಳಬಹುದು.

ಪ್ರತಿ ತಿಂಗಳು ಪಾಲಕರ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡಲಾಗಿದೆ. ಎಸ್ಎಸ್ಎ ಯೋಜನೆಯಡಿ 2.32 ಲಕ್ಷ ವೆಚ್ಚದಲ್ಲಿ 430 ಮೀ.ಶಾಲಾ ಕಾಂಪೌಂಡ್ ನಿರ್ಮಾಣ ಮಾಡಿಸಿ ಗೋಡೆ ಬರಹಗಳು ಬರೆಸಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗಿದೆ. ಶಾಲಾ ಆವರಣದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ಲಲಿತಾದೇವಿ ಸಜ್ಜನಶೆಟ್ಟಿ, ಸಹಶಿಕ್ಷಕ ಸುರೇಶ್ ಸರಾಫ್ ಅವರ ಸಹಕಾರ ಮತ್ತು ಮಾರ್ಗದರ್ಶನದಿಂದ ನಮ್ಮ ಶಾಲೆಯ ಆವರಣದಲ್ಲಿ ಗಿಡ -ಮರಗಳ ಮಧ್ಯದಲ್ಲಿ ಔಷಧಿ ಸಸ್ಯ, ಹೂವಿನ ಮತ್ತು ಶೋ ಗಿಡಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ ಒಟ್ಟಿನಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನನ್ನ ಶಾಲೆಯಲ್ಲಿ ಮಾಡುವ ಅನೇಕ ಚಟುವಟಿಕೆಗಳನ್ನು ಮೊದಲಿನ ಆಯುಕ್ತ ಅತುಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್, ಹಾಲಿ ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಮತ್ತು ಮಧ್ಯಾಹ್ನ ಬಿಸಿ ಊಟದ ವ್ಯವಸ್ಥೆ ನೋಡಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ ಅವರು ಇಲಾಖೆಯ ಗ್ರೂಪದಲ್ಲಿ ಹಂಚಿಕೊಂಡಾಗ ತುಂಬಾ ಮಚ್ಚುಗೆಯನ್ನು ವ್ಯಕ್ತಪಡಿಸಿ ನನ್ನಲ್ಲಿ ಮತ್ತಷ್ಟು ಉತ್ಸುಕತೆ ತುಂಬಿದ್ದಾರೆ ಎಂದು ಸ್ಮರಿಸಿದರು.

ನಾನು ಶಾಲೆಗಾಗಿ ದೈಹಿಕವಾಗಿ ಕೆಲಸ ಮಾಡುವಾಗ ನನಗೆ ಅಂಗವಿಕಲತೆ ಅಡ್ಡ ಆಗದಂತೆ ಅನಿಸಿತ್ತು. ನಾನು ಎರಡು ಕಾಲುಗಳಿಂದ ಅಂಗವಿಕಲತೆ ಹೊಂದಿದ್ದೇನೆ ಎಂಬ ಭಾವನೆ ನನ್ನ ಕರ್ತವ್ಯದಲ್ಲಿ ಸುಳಿಯಲಿಲ್ಲ, ಈಗ ನಿವೃತ್ತಿ ಹೊಂದುವ ದಿನದಿಂದ ನನ್ನ ಒಂದು ಕಾಲು ಹೋಯಿತು ಅಂಗಹೀನವಾಯಿತು ಅಂತ ನನಗನಿಸುತ್ತಿದೆ, ನನ್ನ ಯಶಸ್ವಿ ಸೇವೆಗೆ ಸಹಕರಿಸಿದ ಬಸವ ನಗರದ ಜನರನ್ನು ಯಾವತ್ತೂ ಮರೆಯುವುದಿಲ್ಲ”.-ದೇವಪ್ಪ ನಂದೂರಕರ್ ಮುಖ್ಯಗುರುಗಳು ಸ.ಕಿ.ಪ್ರಾ.ಶಾಲೆ ಬಸವ ನಗರ ಚಿತ್ತಾಪುರ.

ಶಾಲೆಯ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಅಪಾರ ಕಾಳಜಿ ಇರುವ ಶಿಕ್ಷಕ ದೇವಪ್ಪ ನಂದೂರಕರ್ ಅವರಲ್ಲಿನ ಕರ್ತವ್ಯ ಬದ್ಧತೆ ಮತ್ತು ಇಚ್ಛಾಶಕ್ತಿಯಿಂದ ಬಸವ ನಗರದ ಶಾಲೆ ಪ್ರಗತಿ ಹೊಂದಿದೆ, ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ”.- ಮಲ್ಲಿಕಾರ್ಜುನ ಕಾಳಗಿ ಪುರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಚಿತ್ತಾಪುರ.

   “ದೇವಪ್ಪ ನಂದೂರಕರ್ ಅವರು ಬಸವ ನಗರದ ಶಾಲೆಯನ್ನು ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಒಂದು ಸುಂದರ ಶಾಲೆಯನ್ನಾಗಿ ಮಾಡಿದ್ದಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ವಿದ್ಯಾರ್ಥಿ ಮೆಚ್ಚಿದ ಅತ್ಯುತ್ತಮ ಶಿಕ್ಷಕರಾಗಿದ್ದರೆಂದು ಹೇಳಿದರೆ ತಪ್ಪಾಗಲಾರದು, ಅಂಗವಿಕಲತೆ ಮೆಟ್ಟಿ ನಿಂತ ಅವರೊಬ್ಬ ಆದರ್ಶ ಹಾಗೂ ಕ್ರಿಯಾಶೀಲ ಶಿಕ್ಷಕರು”.-ಮಲ್ಲಿಕಾರ್ಜುನ ಸೇಡಂ ಕ್ಷೇತ್ರ ಸಮನ್ವಯಾಧಿಕಾರಿ ಚಿತ್ತಾಪುರ.

Spread the love

Leave a Reply

Your email address will not be published. Required fields are marked *

error: Content is protected !!