ಪ್ರವಾಹ ಪೀಡಿತ ಕಣಸೂರ, ಮಲಘಾಣ ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಬೆಣ್ಣೆತೊರಾ ನದಿಯ ನೀರಿನಿಂದ ಪ್ರಭಾವಕ್ಕೀಡಾಗಿರುವ ಕಣಸೂರು ಮತ್ತು ಮಲಘಾಣ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಗ್ರಾಮಸ್ಥರು ತಮ್ಮನ್ನು ಸ್ಥಳಾಂತರಗೊಳಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ಮಳೆ ಕಡಿಮೆಯಾದ ನಂತರ ಮತ್ತೊಮ್ಮೆ ಗ್ರಾಮಕ್ಕೆ ಭೇಟಿ ನೀಡಿ ಬೇಡಿಕೆ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಲಘಾಣ:
ಮಳೆ ಹಾಗೂ ಬೆಣ್ಣೆತೊರ ನದಿ ನೀರಿನ ಪ್ರವಾಹಕ್ಕೆ ತುತ್ತಾಗಿರುವ ಮಲಘಾಣ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಾಳಗಿ ಹಾಗೂ ಚಿತ್ತಾಪುರ ತಾಲೂಕಿನ ಮಳೆ ಹಾಗೂ ಪ್ರವಾಹಕ್ಕೀಡಾಗಿರುವ ಗ್ರಾಮಗಳ ವಸ್ತುಸ್ಥಿತಿ ಕುರಿತು ಸಮಗ್ರ ವರದಿಯನ್ನು ತಯಾರಿಸಿ ಒಂದು ವಾರದೊಳಗೆ ಸಲ್ಲಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಅವರಿಗೆ ಸೂಚಿಸಿದರು.
ಗ್ರಾಮದ ಬಳಿಯ ಜಮೀನೊಂದರಲ್ಲಿ ಹಾನಿಗೊಳಗಾದ ಕಬ್ಬು ಬೆಳೆಯನ್ನು ವೀಕ್ಷಿಸಿದ ಸಚಿವರು ತಾಲೂಕಿನಲ್ಲಿ ಹಾನಿಗೊಳಗಾದ ಕೃಷಿ ಬೆಳೆಗಳ ಕೂಡಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಜಿಪಂ ಸಿಇಓ ಭಂವರಸಿಂಗ್ ಮೀನಾ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಜಿಪಂ ಮಾಜಿ ಸದಸ್ಯ ರಾಜೇಶ್ ಗುತ್ತೇದಾರ, ಗ್ರಾಪಂ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕಮಕನೂರ, ನಾಗರಾಜ್ ಸಜ್ಜನ್, ಪ್ರವೀಣ್ ಡೊಣ್ಣೂರ ಸೇರಿದಂತೆ ಇತರರು ಇದ್ದರು.

